ಕೊಳ್ಳೇಗಾಲ: ಕಚೇರಿಗೆ ಆಗಮಿಸಿದ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಿ ಗೌರವದಿಂದ ಮಾತನಾಡಿಸಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ನಗರಸಭೆ ಅಧಿಕಾರಿಗಳು ಹಾಗೂ ನೌಕರರಿಗೆ ತಾಕೀತು ಮಾಡಿದರು.
ಕೊಳ್ಳೇಗಾಲ ನಗರಸಭೆ ಕಾರ್ಯಾಲಯಕ್ಕೆ ಸೋಮವಾರ ಧಿಡೀರ್ ಭೇಟಿ ನೀಡಿದ ಅವರು, ಸಾರ್ವಜನಿಕರ ದೂರನ್ನು ಆಲಿಸಿದ್ದಲ್ಲದೆ ಕಚೇರಿಯ ವಿವಿಧ ಅಧಿಕಾರಿಗಳು ಹಾಗೂ ನೌಕರರು ಕಾರ್ಯನಿರ್ವಹಿಸುವ ಕೊಠಡಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಖಾತೆ ವಿಭಾಗದ ಎಸ್‌ಡಿಎ ಗುಣಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡರು. ಕಮಿಷನರ್, ಪ್ರಭಾರ ಕಂದಾಯ ಅಧಿಕಾರಿ ರಾಘವೇಂದ್ರ ಮೇಲೆ ಸಾರ್ವಜನಿಕರಿಂದ ಹಲವು ದೂರುಗಳು ನನಗೆ ಬಂದಿವೆ. ಆದರೆ ಗುಣಶ್ರೀ ಅವರ ಮೇಲೆ ಹೆಚ್ಚಿದೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದರೆ ಗೌರವದಿಂದ ನಡೆಸಿಕೊಳ್ಳಿ. ಅವರ ಅರ್ಜಿಗಳಿಗೆ ಸ್ಪಂದಿಸಿ, ಏನಾದರೂ ದಾಖಲೆಗಳು ಅಗತ್ಯವಿದ್ದರೆ ಕೇಳಿ ಪಡೆಯಿರಿ. ಅವರ ಕೆಲಸ ಯಾವಾಗ ಆಗಲಿದೆ ಎಂದು ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಧ್ಯವರ್ತಿಗಳಿಗೆ ಮಾತ್ರ ಕೆಲಸ ಬೇಗ ಆಗುತ್ತಿದೆ. ಕೆಲವರಿಗೆ ಅರ್ಜಿ ನೀಡಿ 3 ತಿಂಗಳಾದರೂ ಅವರ ಕಡತಗಳು ನಾಪತ್ತೆಯಾಗಿದೆ. ಯಾರಾದರೂ ಹೆಂಗಸರು ಅವರ ಕೆಲಸಕ್ಕೆ ಬಂದರೆ ಏಕವಚನದಲ್ಲಿ ಮಾತನಾಡಿಸುತ್ತಾರೆ ಎಂಬ ದೂರಿದೆ. ಆದ್ದರಿಂದ ನಾನು ಯಾರಿಗೂ ತಿಳಿಸದೇ ಎಲ್ಲರನ್ನು ವಿಚಾರಿಸಲು ಬಂದಿದ್ದೇನೆ. ಇನ್ನು ಮುಂದೆ ಇಂತಹ ದೂರುಗಳು ಬಂದರೆ ನಾನು ನಿಮ್ಮ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಮಧುಚಂದ್ರ ಮಾತನಾಡಿ, 14ನೇ ವಾರ್ಡ್ ದೇವಾಂಗ ಪೇಟೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಆಗಿ ಮೂರು ತಿಂಗಳಾಗಿದೆ. ಆದರೆ ಕೆಲಸವಾಗಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ಥಳದಲ್ಲಿದ್ದ ಗುತ್ತಿಗೆದಾರನಿಗೆ ಕೆಲಸ ಮಾಡದಿದ್ದರೆ ನೋಟಿಸ್ ನೀಡುತ್ತೇನೆ ಎಂದು ಎಚ್ಚರಿಸಿದರು. ಈ ವೇಳೆ ಇತರರು ಶಾಸಕರಿಗೆ ಮೌಖಿಕ ದೂರುಗಳನ್ನು ನೀಡಿದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪಾ ಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರು, ನಗರಸಭೆ ಪೌರಯುಕ್ತ ರಮೇಶ್, ಸಿಬ್ಬಂದಿ ಹಾಗೂ ಮುಖಂಡರು ಹಾಜರಿದ್ದರು.