ಸಿಂಧನೂರು ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ್ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಜಿಪಂ ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಚನ್ನಾರೆಡ್ಡಿ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರೂಪಾಪುರ, ಶಸ್ತ್ರ ಚಿಕಿತ್ಸಕ ಸಂಘದ ರಾಜ್ಯ ಮಾಜಿ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್ ಇತರರಿದ್ದರು. 
ಜಿಲ್ಲೆ

ಶಿಕ್ಷಣ ಮಕ್ಕಳ ಮನಮುಟ್ಟುವಂತಿರಲಿ

ರುದ್ರಪ್ಪ ವಾಲಿ

ಸಿಂಧನೂರು:ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಶೈಕ್ಷಣಿಕ ಕ್ಷೇತ್ರದ ಸೂಪರ್‌ಸ್ಟಾರ್‌ಗಳಾಗಿದ್ದು ಅವರ ಸಾಧನೆಯಿಂದ ದೇಶಕ್ಕೆ ದೊಡ್ಡ ಭವಿಷ್ಯ ಇದೆ ಎಂದು ಕಲಬುರಗಿ ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕ ಚನ್ನಾರೆಡ್ಡಿ ಹೇಳಿದರು.

ನಗರದ ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ್ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಬಡತನ, ಗ್ರಾಮೀಣ ಪ್ರದೇಶದಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಯಾವುದೇ ವ್ಯಕ್ತಿಗೆ ಪ್ರೋತ್ಸಾಹ, ಸತತ ಪ್ರಯತ್ನ ಹಾಗೂ ಪುರಸ್ಕಾರಗಳು ಒಂದಕ್ಕೊಂದು ಸೇತುವೆಯಂತಿದ್ದು ನಿಖರ ಗುರಿ ಇಟ್ಟುಕೊಂಡು ಪರಿಶ್ರಮ ಪಡುವವರಿಗೆ ಫಲ ಸಿಕ್ಕಿ ಸಿಗುತ್ತದೆ. ಮಕ್ಕಳ ಮನಸ್ಸು ಅರಳಿಸುವ ರೀತಿಯಲ್ಲಿ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.

ಶಸ್ತ್ರ ಚಿಕಿತ್ಸಕರ ಸಂಘದ ರಾಜ್ಯ ಮಾಜಿ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿಯೇ ಆಗಾಧ ಪ್ರತಿಭೆ ಇದೆ. ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಹಸಿವು- ಬಡತನ ಇದ್ದಲ್ಲಿ ಕಲಿಕಾಸಕ್ತಿ ಹೆಚ್ಚಲಿದೆ. ಟಿವಿ, ಮೊಬೈಲ್ ಹಾಗೂ ದುಶ್ಚಟಗಳ ದಾಸರಾಗದೆ, ಜ್ಞಾನದ ದಾಸರಾದರೆ ನಿಮ್ಮ ಭವಿಷ್ಯವೇ ಉಜ್ವಲಗೊಳ್ಳಲಿದೆ. ನಿಸ್ವಾರ್ಥ ಸೇವೆ ಮೈಗೂಡಿಸಿಕೊಂಡಲ್ಲಿ ಜೀವನಲ್ಲಿ ಯಶಸ್ಸು ಖಂಡಿತ ಸಿಗಲಿದೆ. ಜಸ್ಟಿಸ್ ಶಿವರಾಜ ಪಾಟೀಲ್‌ರು ಪ್ರತಿಷ್ಠಾನದಿಂದ ಇಂಥ ಅಗತ್ಯ ಕಾರ್ಯಾಗಾರಗಳನ್ನು ರಾಜ್ಯದಲ್ಲಿ ನಡೆಸುವ ಮೂಲಕ ಎಸ್ಸೆಸ್ಸೆಲ್ಸಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಶ್ಲಾಘನೀಯ ಎಂದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಹುಡೇದ, ಬಿಸಿಯೂಟ ಅಧ್ಯಕ್ಷ ಸಾಬಣ್ಣ ವಗ್ಗರ್, ರಡ್ಡಿ ಶಾಲೆ ಮುಖ್ಯಶಿಕ್ಷಕ ನಾಗಪ್ಪ ಹೆರೂರು, ಶಿಕ್ಷಕರಾದ ಜಿ.ಎಸ್.ಪಾಟೀಲ್, ರವೀಂದ್ರಗೌಡ ಇತರರಿದ್ದರು. ಸಿಂಧನೂರು ನಗರದ ವಿವಿಧ ಶಾಲೆಗಳಿಂದ 1,500 ಕ್ಕೂ ಅಧಿಕ ಎಸ್ಸೆಸ್ಸೆಲ್ಸಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.