ಚಿಕ್ಕಮಗಳೂರು: ಪಠ್ಯಪುಸ್ತಕದ ಬಗ್ಗೆ ಶ್ರದ್ಧೆ, ಗೌರವದ ಭಾವ ಅಗತ್ಯ. ಪುಸ್ತಕವನ್ನೆ ಗೌರವಿಸದವರಿಗೆ ವಿದ್ಯೆ ಒಲಿಯುವುದು ಕಷ್ಟಸಾಧ್ಯ ಎಂದು ಮಹಿಳಾಶ್ರಮದ ಅಧ್ಯಕ್ಷೆ ಅನಿತಾನಾಗೇಂದ್ರ ಅಭಿಪ್ರಾಯಪಟ್ಟರು.
ನಗರದ ಬಸವನಹಳ್ಳಿ ಮಹಿಳಾಶ್ರಮದ ಹಿರಿಯಪ್ರಾಥಮಿಕ ಶಾಲಾಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತç ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯಪುಸ್ತಕಗಳು ಶಿಕ್ಷಣದ ಅವಿಭಾಜ್ಯ ಅಂಗ. ಪುಸ್ತಕಗಳೇ ಜ್ಞಾನಾರ್ಜನೆಗೆ ಮೂಲ. ಓದು ಮತ್ತು ಬರಹ ವಿದ್ಯಾರ್ಥಿಗಳ ಮೂಲಭೂತ ಕರ್ತವ್ಯ. ಪಠ್ಯಪುಸ್ತಕಗಳಿರಲಿ, ಬರೆಯುವ ನೋಟ್‌ಬುಕ್‌ಗಳಿರಲಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಪುಸ್ತಕಗಳ ಬಗ್ಗೆ ಗೌರವ, ಶ್ರದ್ಧೆ ಇದ್ದರೆ ತಾಳ್ಮೆಯಿಂದ ನಿಧಾನವಾಗಿ ಪುಟಗಳನ್ನು ತಿರುವಿ ಅಧ್ಯಯನ ಮಾಡಲು ಸಾಧ್ಯವಿದೆ ಎಂದರು.
ಪುಸ್ತಕ ಹರಿಯದೆ, ಹಾಳುಮಾಡದೆ, ಗೀಚದೆ, ಹೊರಕವಚ ವಿಲಕ್ಷಣಗೊಳಿಸದೆ ಪ್ರೀತಿ, ಗೌರವದಿಂದ ಪರಿಪಾಲಿಸಬೇಕು. ೧ರಿಂದ ೭ನೆಯ ತರಗತಿವರೆಗಿನ ವಿದ್ಯಾರ್ಥಿಗಳು ಪುಸ್ತಕವನ್ನು ಸುಸ್ಥಿತಿಯಲ್ಲಿ ವರ್ಷದ ಕೊನೆಯವರೆಗೂ ಇಟ್ಟುಕೊಂಡರೆ ಅಂಥ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು.
ಮಹಿಳಾಶ್ರಮದ ಕಾರ್ಯದರ್ಶಿ ವಸುಧಾ ಹರೀಶ್ ಮಾತನಾಡಿ, ಹಿಂದೆ ಹಣಕೊಟ್ಟು ಪಠ್ಯಪುಸ್ತಕ ಖರೀದಿಸಬೇಕಿತ್ತು. ಅದನ್ನು ವರ್ಷಪೂರ್ತಿ ಕಾಪಿಟ್ಟು ಮುಂದಿನ ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಪರಿಪಾಠವಿತ್ತು. ಈಗ ಉಚಿತವಾಗಿ ಪಠ್ಯ ಪೂರೈಕೆಯಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಸಹಕಾರ್ಯದರ್ಶಿ ಸುಮಿತ್ರಾ ಮಾತನಾಡು, ಪಠ್ಯದ ಓದಿನ ಜೊತೆಗೆ ಸಾಧಕರು, ಮಹಾಪುರುಷರು, ರಾಷ್ಟçಪುರುಷರ, ಸಾಧ್ವಿಗಳ ಜೀವನಚರಿತ್ರೆಯನ್ನೂ ತಿಳಿದುಕೊಳ್ಳುವುದು ಅಗತ್ಯ. ಪಾಠದ ಜೊತೆಗೆ ಹಿತಮಿತವಾಗಿ ಆಟ ಮನರಂಜನೆಯೂ ಇರಲಿ. ಶಿಸ್ತು, ಸಮಯಪಾಲನೆ ಮುಖ್ಯ. ಸಮವಸ್ತçವನ್ನು ಶುಭ್ರವಾಗಿ ಕಾಪಾಡಬೇಕು. ಸಮವಸ್ತç ಸಮಾನತೆ ಮತ್ತು ಆತ್ಮವಿಶ್ವಾಸವನ್ನು ತಂದುಕೊಡುತ್ತದೆ ಎಂದರು.
ವ್ಯವಸ್ಥಾಪಕಿ ವಾಸಂತಿ ಪೈ, ಮುಖ್ಯ ಶಿಕ್ಷಕ ಪ್ರವೀಣ ಕುಮಾರ, ನಿರ್ದೇಶಕಿ ರಮಾ ಸತೀಶ್, ಶಿಕ್ಷಕಿ ಜ್ಯೋತಿ, ಸುಧಾಮ, ಕಮಲಾ ಉಪಸ್ಥಿತರಿದ್ದರು.