ಜಿಲ್ಲೆ

ಅತ್ತೆ-ಮಾವರೊಂದಿಗೆ ಅನ್ಯೋನ್ಯವಾಗಿರಿ

ಬಂಕಾಪುರ: ದಂಪತಿಗಳು ಅತ್ತೆ, ಮಾವರೊಂದಿಗೆ ಅನ್ಯೋನ್ಯವಾಗಿ ಬದುಕಬೇಕು. ಅಂತಹ ಮನೆ ಭೂಲೋಕದ ಸ್ವರ್ಗದಂತಿರುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ಸಮೀಪದ ಬಿಸನಳ್ಳಿ ಗ್ರಾಮದ ಶ್ರೀ ಜ.ಪಂ.ವೇ.ಆ.ಸಂ.ಸಂ. ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೋಮವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ, ಅಯ್ಯಾಚಾರ (ದೀಕ್ಷಾ) ಮತ್ತು ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಒಂದೊಂದು ಮಕ್ಕಳನ್ನು ಹೇರುವಂತಹ ಪದ್ಧತಿ ಸರಿಯಲ್ಲ. ಅದಕ್ಕೆ ಕನಿಷ್ಠ ಐದು ಮಕ್ಕಳಿಗೆ ಜನ್ಮ ಕೊಡುವಂತಹ ಕೆಲಸವಾಗಬೇಕು. ನಿಮಗೆ ಮಕ್ಕಳ ಆರೈಕೆ, ವಿದ್ಯಾಭ್ಯಾಸ ಕಷ್ಟವಾದರೆ ನಮ್ಮ ಪಾಠಶಾಲೆಗೆ ತಂದು ಬಿಡಿ. ಅವರ ಸಂಪೂರ್ಣ ಆರೈಕೆ, ವಿದ್ಯಾಭ್ಯಾಸ ಪಾಠಶಾಲೆ ವಹಿಸಿಕೊಳ್ಳಲಿದೆ ಎಂದರು.

ಬಲ್ಕಂಪೇಟೆಯ ವೀರಶೈವ ಸೇವಾ ಸಮಾಜದವರು ಬಹಳ ದೊಡ್ಡ ಪ್ರಮಾಣದ ವಿವಾಹ ಸಮಾರಂಭವನ್ನು ಪ್ರತಿವರ್ಷ ಮಾಡುತ್ತಾ ಬಂದಿದ್ದಾರೆ. ಶಾಸ್ತ್ರೋಕ್ತವಾಗಿ ಶಿವ-ಪಾರ್ವತಿಯರ ವಿವಾಹದೊಂದಿಗೆ ಮಂಗಳ ವಿವಾಹ ಸಮಾರಂಭ ಶ್ರೇಷ್ಠ ವೈದಿಕರ ಮಂತ್ರೋತ್ಸವದೊಂದಿಗೆ ನಡೆಯುತ್ತಿರುವುದು ನಿಮ್ಮೆಲ್ಲರ ಭಾಗ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಶಿ ಪೀಠದ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಈ ಮೊದಲು ಸಾಮೂಹಿಕ ವಿವಾಹದಲ್ಲಿ ಮದುವೆಗೆ ಹಿಂಜರಿಯುತ್ತಿದ್ದರು. ಈಗ ಮುಂದೆ ಬರುತ್ತಿದ್ದಾರೆ. ಸಾಮೂಹಿಕ ವಿವಾಹಗಳು ಬಡವರ ಮದುವೆ ಅಲ್ಲ. ಹಾಗಂತ ತಿಳಿದರೆ ನಮ್ಮಂತಹ ಮೂರ್ಖರು ಯಾರೂ ಇಲ್ಲ ಎಂದು ತಿಳಿದುಕೊಳ್ಳಬೇಕು. ಇದು ಬಡವರ ಮದುವೆ ಅಲ್ಲ. ಭಾಗ್ಯವಂತರ ಮದುವೆ ಎಂದು ತಿಳಿದುಕೊಳ್ಳಬೇಕು ಎಂದರು.

ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ನಡೆಯಿತು. ಬಿಸನಳ್ಳಿಯ ಕಲ್ಲಪ್ಪ ಆಜೂರ ಕುಟುಂಬದವರು ಉಜ್ಜಯನಿ ಸ್ವಾಮೀಜಿಗಳಿಗೆ ಬಂಗಾರದ ಕಿರೀಟದ ಭಕ್ತಿ ಸೇವೆ ಸಲ್ಲಿಸಿದರು. ಸಮಾರಂಭಕ್ಕೂ ಮೊದಲು ಜಂಗಮ ವಟುಗಳಿಗೆ ಅಯ್ಯಾಚಾರ ನಡೆಯಿತು. 32 ಜೋಡಿಗಳ ವಿವಾಹ ನಡೆಯಿತು.

ಅರಳೆಲೆಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಿರೇಮಣಕಟ್ಟಿಯ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು, ಭರತ ಬೊಮ್ಮಾಯಿ, ಡಾ. ಬಸವರಾಜ ನರೇಗಲ್ಲ, ತಿಪ್ಪಣ್ಣ ಸಾತಣ್ಣವರ, ಶಿವಾನಂದ ಮ್ಯಾಗೇರಿ, ಉಷಾ ಬಿಳೆಕುದರಿ, ಕಾಶಿನಾಥ ಕಳ್ಳಿಮನಿ ಬಿಸನಳ್ಳಿ ಪಾಠಶಾಲೆಯ ಗುರುಗಳು, ವಟುಗಳು ಉಪಸ್ಥಿತರಿದ್ದರು.