ಜಿಲ್ಲೆ

ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ

ವಿನಯ ಹೆಗಡೆ

ಅಂಕೋಲಾ: ಪಟ್ಟಣದ ವಿವಿಧಡೆ ಮಾ. 13ರಂದು ಬೆಳಂಬಾರ ಸುಗ್ಗಿ ವಿಶೇಷ ಪ್ರದರ್ಶನ ಜತೆಯಲ್ಲಿ ತಾಲೂಕಿನ ಹಲವು ಕಡೆ ಕಾಮದಹನ ಹಾಗೂ ಮಾ. 14ರಂದು ಹೋಳಿ ಹಬ್ಬದ ಆಚರಣೆ ನಡೆಯಲಿದೆ. ಹಬ್ಬದ ಸಂಭ್ರಮಾಚರಣೆ ಹೆಸರಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ನಿಶ್ಚಲ ನರೋನಾ ಹೇಳಿದರು.

ತಹಸೀಲ್ದಾರ್ ಕಚೇರಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಹೋಳಿ ಹಬ್ಬದ ಪೂರ್ವಭಾವಿ ಶಾಂತಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಹಿಂದಿನಿಂದಲೂ ನಡೆದು ಬಂದಿರುವ ಪ್ರಸಿದ್ಧ ಬೆಳಂಬಾರ ಸುಗ್ಗಿ ಕುಣಿತ ಹಾಗೂ ತಾಲೂಕಿನೆಲ್ಲಡೆಯ ಹೋಳಿ ಆಚರಣೆ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಯಾರ ಮೇಲೂ ಬಣ್ಣ ಎರಚುವ ಕೃತ್ಯಗಳನ್ನು ನಡೆಸಬಾರದು. ಕರ್ಕಶ ಶಬ್ದ ಮಾಡುತ್ತಾ ಬೇಕಾಬಿಟ್ಟಿ ಬೈಕ್ ಓಡಿಸುವುದು, ಅನಗತ್ಯ ಗದ್ದಲ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಬೆಳಂಬಾರದ ಷಣ್ಮುಖ ಗೌಡ ಮಾತನಾಡಿ, ಮಾ.13ರಂದು ನಮ್ಮ ಸುಗ್ಗಿ ತಂಡ ನೀಡುವ ವಿಶೇಷ ಪ್ರದರ್ಶನಕ್ಕೆ ಸರ್ವರ ಸಹಕಾರ ಕೋರಿದರು. ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಮಾತನಾಡಿ ಬೆಳಂಬಾರ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ ಮತ್ತು ಹಗರಣ ಪ್ರದರ್ಶ ನಕ್ಕೆ ಬ್ರಿಟಿಷರ ಕಾಲದ ಹಿನ್ನೆಲೆಯಿದ್ದು ಹೋಳಿ ಹಬ್ಬದ ಮರುದಿನ ಬೆಳಂಬಾರದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಸುಗ್ಗಿಯ ವಿವಿಧ ಸಂಪ್ರದಾಯಗಳು ನಡೆಯಲಿವೆ ಎಂದರು.

ಬೆಳಂಬಾರ ಗ್ರಾಪಂ.ಮಾಜಿ ಅಧ್ಯಕ್ಷ ಮಾದೇವ ಬಿ.ಗೌಡ ಮಾತನಾಡಿ, ಹಗರಣ ಮೆರವಣಿಗೆ ಸಂದರ್ಭದಲ್ಲಿ ವಾಹನಗಳ ಸಂಚಾರ ವ್ಯವಸ್ಥೆ ಮತ್ತು ಸೇರುವ ಸಾವಿರಾರು ಜನರ ನಿಯಂತ್ರಣಕ್ಕೆ ಕ್ರಮಕೈಗೊಳ್ಳ ಬೇಕು. ಪಟ್ಟಣದ ಪೋಸ್ಟ್ ಆಫೀಸ್ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಹಾಕಲು ಅವಕಾಶ ನೀಡಬಾರದು. ಬದಲೀ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಫಾಲ್ಗುಣ ಗೌಡ, ಆನಂದು ಗೌಡ, ಶ್ಯಾಮಸುಂದರ ಗೌಡ, ಮಂಗು ಗೌಡ , ಸುಭಾಸ ನಾರ್ವೆಕರ, ಭಾಸ್ಕರ ನಾರ್ವೆಕರ, ರಾಜೇಂದ್ರ ನಾಯ್ಕ, ವಿನೋದ ನಾಯಕ ಮತ್ತಿತರರು ಮಾತನಾ ಡಿದರು. ಶಿರಸ್ತೆದಾರ ಗಿರೀಶ್ ಜಾಂಬವಳಿಕರ್, ಪಿ.ಎಸ್.ಐ ಸುಹಾಸ, ಚಾರು ಗೌಡ, ವಿಷ್ಣು ಗೌಡ, ಬುದ್ದು ಗೌಡ, ಕುಮಾರ ಗೌಡ , ಮಂಜುನಾಥ ಗೌಡ, ರಾಜು ಗೌಡ, ಶೇಖರ ಗೌಡ ಇತರರಿದ್ದರು.