ಮೈಸೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಭಾನುವಾರ ವರುಣ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಗ್ರಾಮದಲ್ಲಿ ನೀರಿನ ಟ್ಯಾಂಕ್, ಕೊಳವೆ ಬಾವಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶುದ್ಧತೆಗಾಗಿ ನೀರಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.
ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಅರಿವು ಮೂಡಿಸಬೇಕು. ಕುಡಿಯುವ ನೀರನ್ನು ಕುದಿಸಿ ಆರಿಸಿ ಬಳಸುವಂತೆ ಜಾಗೃತಿ ಮೂಡಬೇಕು ಎಂದರು.
ಜಾಗೃತಿ ಕಾರ್ಯಕ್ರಮಕ್ಕಾಗಿ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಅರಿವು ಮೂಡಿಸಬೇಕು. ಸಣ್ಣ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ವಯಸ್ಸಾದವರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಸೂಚಿಸಿದರು.
ವರುಣ ಗ್ರಾಮದ ಕುಡಿಯುವ ನೀರಿನ ಸ್ಥಾವರಗಳನ್ನು ಪರಿಶೀಲಿಸಿ ದೇವಮ್ಮನ ದೇವಸ್ಥಾನದ ಕುಡಿಯುವ ನೀರಿನ ಸ್ಥಾವರದ ಕೇಸಿಂಗ್ ಪೈಪ್‌ಗೆ ಕ್ಯಾಪ್ ಹಾಕಲು ತಿಳಿಸಿದರು. ವರುಣ ಗ್ರಾಮದ ಸುತ್ತೂರು ಮುಖ್ಯ ರಸ್ತೆಯ ಬಲಭಾಗದಲ್ಲಿರುವ ಕುಡಿಯುವ ನೀರಿನ ಸ್ಥಾವರದಲ್ಲಿ ಕೇಸಿಂಗ್ ಎತ್ತರಿಸಲು ಸೂಚಿಸಿದರು.