ಜಿಲ್ಲೆ

ಅರ್ಹರಿಗೆ ‘ಗ್ಯಾರಂಟಿ’ ಅನ್ಯಾಯವಾಗದಂತೆ ಎಚ್ಚರ ವಹಿಸಿ

ಮೈಸೂರು: ಬಡವರು, ಅರ್ಹರಿಗೆ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದ್ದು, ಅರ್ಹರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗಾಗಿ ಮೊಟ್ಟೆ, ಹಾಲು, ಹಣ್ಣು, ಚಿಕ್ಕಿ, ಊಟ, ಹಾಸ್ಟೆಲ್ ಮಕ್ಕಳಿಗೂ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಹೀಗಿದ್ದೂ ರಾಜ್ಯದಲ್ಲಿ ಅಪೌಷ್ಟಿಕತೆ ಪ್ರಮಾಣ ಕಡಿಮೆ ಆಗುತ್ತಿಲ್ಲ. ಈ ಬಗ್ಗೆ ನಿಗಾ ವಹಿಸಬೇಕು. ಜಿಲ್ಲೆಯ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಉಚಿತ ವಿದ್ಯುತ್ ಬಗ್ಗೆ ಪರಿಶೀಲನೆ: ಸರ್ಕಾರಿ ಶಾಲೆಗಳಂತೆ ಅಂಗನವಾಡಿಗಳಿಗೂ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ ಹೇಳಿದರು. ಇದಕ್ಕೆ ಸ್ಪಂದಿಸಿದ ಸಿಎಂ, ವರದಿ ಪಡೆದ ಬಳಿಕ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಬಸ್ ಸೌಲಭ್ಯ ಕಲ್ಪಿಸಿ:

ದಸರಾದಲ್ಲಿ ಪ್ರವಾಸಿಗರಿಗೆ ಶಾಲೆಗಳಿಗೆ ಹೋಗುವ ಮಕ್ಕಳಿಗೆ, ಶಿಕ್ಷಕಿಯರಿಗೆ ತೊಂದರೆಯಾಗದಂತೆ ತೊಂದರೆಯಾಗದಂತೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿರುವ ರಸ್ತೆ ಗುಂಡಿಗಳನ್ನು ಮೊದಲು ಸಮರ್ಪಕವಾಗಿ ಮುಚ್ಚಲು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.

ರಿಂಗ್ ರೋಡ್‌ನಲ್ಲಿ ಸರ್ವೀಸ್ ರಸ್ತೆ ಏಕಿಲ್ಲ:

ರಿಂಗ್ ರಸ್ತೆಯ ಬೀದಿ ದೀಪ ಸಮಸ್ಯೆಯನ್ನು ತುರ್ತಾಗಿ ದುರಸ್ತಿಪಡಿಸಿ ಎಂದ ಸಿಎಂ, ರಿಂಗ್ ರಸ್ತೆಯ ಸುತ್ತ ಸರ್ವೀಸ್ ರಸ್ತೆಯನ್ನು ನಿರ್ಮಿಸದಿರುವುದಕ್ಕೆ ಸಿಎಂ ವಿಪರೀತ ಗರಂ ಆದರು. ಸರ್ವೀಸ್ ರಸ್ತೆ ನಿರ್ಮಿಸಲು ಲಿಟಿಗೇಷನ್ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಸಚಿವ ಮಹದೇವಪ್ಪ, ಯಾವ ಲಿಟಿಗೇಷನ್ ಕೂಡ ಇಲ್ಲ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗಲೇ ಎಲ್ಲವನ್ನೂ ಬಗೆಹರಿಸಲಾಗಿದೆ. ಮೊದಲು ಕೆಲಸ ಪ್ರಾರಂಭಿಸಿ ಎಂದು ತಾಕೀತು ಮಾಡಿದರು.

ಮೈಸೂರು ಹಳೇ ಜಿಲ್ಲಾಧಿಕಾರಿ ಕಚೇರಿಯನ್ನು ಮೈಸೂರಿನ ಚರಿತ್ರೆ ಮತ್ತು ಇತಿಹಾಸ ಸಾರುವ ಮ್ಯೂಸಿಯಂ ಆಗಿ ಮಾರ್ಪಡಿಸಿ, ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.

212 ಯುಜಿಡಿ ಪೌರ ಕಾರ್ಮಿಕರ ಸಮಾನ ಕೆಲಸ-ಸಮಾನ ವೇತನ ಜಾರಿಗೊಳಿಸುವಂತೆ 3 ವರ್ಷಗಳಿಂದ ಬೇಡಿಕೆ ಇದೆ. ಇತರ ಪೌರ ಕಾರ್ಮಿಕರಿಗೆ ನೀಡಿರುವ ಸವಲತ್ತುಗಳನ್ನೇ ತಮಗೂ ನೀಡಬೇಕು ಎನ್ನುವ ಬೇಡಿಕೆ ಅವರದ್ದಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

ನಗೆಪಾಟಲಿಗೆ ಈಡಾದ ಡಿಡಿಪಿಐ


ಸರಿಯಾದ ಉತ್ತರ ನೀಡದೆ ಡಿಡಿಪಿಐ ನಗೆಪಾಟಲಿಗೆ ಈಡಾದರು. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆಯೇ ಎಂದು ಸಿಎಂ ಕೇಳಿದ ಪ್ರಶ್ನೆಗೆ ‘ಹೂಂ ಸಾರ್, ಇಲ್ಲ ಸಾರ್’ ಎಂದರು. ನಿಮ್ಮ ಮಾತನ್ನು ಖಾಸಗಿ ಶಾಲೆ ಆಡಳಿತ ಮಂಡಳಿ ಕೇಳುತ್ತದೆಯೋ ಎಂದು ಕೇಳಿದ ಪ್ರಶ್ನೆಗೂ ‘ಇಲ್ಲ ಸಾರ್’ ಎಂದು ಡಿಡಿಪಿಐ ಉತ್ತರಿಸಿದ್ದಕ್ಕೆ ಸಭೆಯಲ್ಲಿ ನಗೆ ಉಕ್ಕಿತ್ತು.

ಯಾವುದಾದರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ ಎಂದು ಸಿಎಂ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಡಿಡಿಪಿಐ ತಡವರಿಸಿದರು. ಆಗ ಸಿಎಂ, ಯಾವುದೇ ಒಂದು ಸ್ಕೂಲ್ ಹೆಸರು ಹೇಳಪ್ಪಾ ಹೋಗ್ಲಿ ಎಂದರು. ಆಗಲೂ ಸಭೆ ನಗೆಗಡಲಿನಲ್ಲಿ ತೇಲಿತು. ಬೇಸತ್ತ ಸಿಎಂ, ‘ನೀವು ಕಷ್ಟಪಟ್ಟು ಓದಿದ್ದೀರಾ’ ಎಂದು ಕೇಳಿದರೆ, ‘ಇಲ್ಲ ಸಾರ್’ ಎನ್ನುವ ಉತ್ತರ ಡಿಡಿಪಿಐ ಅವರಿಂದ ಬಂತು. ಆಗಲೂ ಸಭೆಯಲ್ಲಿ ಹಾಸ್ಯ ಹೊನಲು ಹರಿಯಿತು. ಕೊನೆಗೆ ಒಂದು ವಾರದಲ್ಲಿ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದರು.

ಈರುಳ್ಳಿ ಬಜ್ಜಿ ಇಲ್ವಾ, ಇದ್ರೆ ಕೊಡು

ಸಂಜೆ ಹೊತ್ತು ಮೆಣಸಿನ ಕಾಯಿ ಬಜ್ಜಿಯನ್ನು ತಿಂಡಿಗಾಗಿ ವಿತರಿಸಲಾಯಿತು. ತಮಗೆ ಮೆಣಸಿನಕಾಯಿ ಬಜ್ಜಿ ನೀಡಲು ಬಂದವರಿಗೆ ಸಿಎಂ, ಏಯ್ ಈರುಳ್ಳಿ ಬಜ್ಜಿ ಇಲ್ವಾ ಎಂದು ಕೇಳಿ, ಇದ್ದರೆ ಕೊಡು ಎಂದರು. ಆ ಮೇಲೆ ಮೆಣಸಿನಕಾಯಿ ಬಜ್ಜಿಯನ್ನೂ ಬಾಯಿಗೆ ಹಾಕಿ ಸವಿದರು.

ಬರೋಬರಿ ಎಂಟುವರೆ ತಾಸು ಸುದೀರ್ಘವಾಗಿ ಸಭೆ

ನಗರದ ಲೋಕಾಯುಕ್ತ ಕಚೇರಿಯಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಸಿಎಂ ನಿರಾಳರಾಗಿ ಬರೋಬರಿ ಎಂಟುವರೆ ತಾಸು ಸುದೀರ್ಘವಾಗಿ ಸಭೆ ನಡೆಸಿದರು. ಬಿಜೆಪಿ ಪ್ರತಿಭಟನೆ ನಡೆಸಿದ್ದರೂ ಲೆಕ್ಕಿಸದ ಅವರು, ಏನು ಆಗಿಲ್ಲ ಎನ್ನುವಂತೆ ತಮ್ಮ ಎಂದಿನ ಶೈಲಿಯಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು.

ಎಂಟುವರೆ ತಾಸು ಸುದೀರ್ಘ ಸಭೆ:

ಬೆಳಗ್ಗೆ 11.30ಕ್ಕೆ ಶುರುವಾಗಬೇಕಿದ್ದ ಸಭೆ ಮಧ್ಯಾಹ್ನ 12.54ರ ಸುಮಾರಿಗೆ ಆರಂಭಗೊಂಡಿತು. ಪ್ರತಿಯೊಂದು ಇಲಾಖೆಯ ಮಾಹಿತಿ ಪಡೆದ ಅವರು, ಅಧಿಕಾರಿಗಳಿಗೆ ಬೆವರಿಸಿಳಿದರು. ಊಟಕ್ಕೆ ಅಧಿಕಾರಿಗಳಿಗೆ ಅರ್ಧಗಂಟೆ ಬಿಡುವು ಕೊಟ್ಟ ಸಿಎಂ, ರಾತ್ರಿ 9.35ರ ವರೆಗೂ ಸಭೆ ನಡೆಸಿ ತಲೆಚಿಟ್ಟು ಹಿಡಿಸಿದರು