ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಸದ್ಯ ನಡೆಸಿರುವ ಆಸ್ತಿ ಸಮೀಕ್ಷೆ ತಾಂತ್ರಿಕವಾಗಿ ಸರಿ ಇಲ್ಲ. ಹೆಸ್ಕಾಂದಿಂದ ಮೀಟರ್ ನೀಡಿರುವ ಮನೆಗಳ ಸಂಖ್ಯೆಗೂ ಮತ್ತು ಎಚ್ಡಿಎಂಸಿ ಆಸ್ತಿ ಸಂಖ್ಯೆಗೂ ವ್ಯತ್ಯಾಸವಿದೆ. ಈ ಕುರಿತು ಕ್ರಮವಹಿಸಿ. ಸಮನ್ವಯತೆ ಸಾಧಿಸಿ, ಪ್ರತಿ ಆಸ್ತಿಗೂ ಟ್ಯಾಕ್ಸ್ ಬರುವಂತೆ ಕ್ರಮವಹಿಸಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹು-ಧಾ ಮಹಾನಗರ ಪಾಲಿಕೆ ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಾಲಿಕೆಯಿಂದ ವಿವಿಧ ಉದ್ದೇಶಗಳಿಗೆ ಬಹಳ ವರ್ಷಗಳ ಹಿಂದೆ 999 ವರ್ಷ, 99 ವರ್ಷ ವರ್ಷಗಳ ಅವಧಿಗೆ ಸುಮಾರು 2,474 ಪಾಲಿಕೆ ಆಸ್ತಿಗಳನ್ನು ಲೀಜ್ ಕೊಡಲಾಗಿದೆ. ಇದನ್ನು ಕೆಲವರು ನಿಯಮ ಬಾಹಿರವಾಗಿ ಮತ್ತೊಬ್ಬರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಕರ ವಸೂಲಾತಿ ಪ್ರಗತಿ ಆಗಬೇಕು. ಸುಮಾರು 45 ಸಾವಿರಕ್ಕೂ ಅಧಿಕವಾಗಿ ಅನಧೀಕೃತ ಸೈಟ್ ನಿರ್ಮಾಣವಾಗಿವೆ. ಇವುಗಳಿಂದ ನಾಗರಿಕ ಸವಲತ್ತು, ಮೂಲ ಸೌಕರ್ಯ ನೀಡಲು ಸಮಸ್ಯೆಗಳು ಆಗುತ್ತಿವೆ. ಪ್ರತಿ ಆಸ್ತಿಯೂ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡಿಸಬೇಕು. ಪ್ರತಿ ವಲಯದಲ್ಲಿ ಈ ಕುರಿತು ಅಭಿಯಾನ ಆಗಬೇಕು ಎಂದರು.
ನಗರದಲ್ಲಿನ ಅನಧಿಕೃತ ಪಿಜಿಗಳ ಬಗ್ಗೆ ವಲಯ ಸಹಾಯಕ ಆಯುಕ್ತರು ತಮ್ಮ ವಲಯದ ವಾರ್ಡ್ಗಳಲ್ಲಿ ಸಮೀಕ್ಷೆ ಮಾಡಿ ಪಿಜಿಗಳು ಎಷ್ಟಿವೆ, ಎಷ್ಟು ಜನ ವಾಸಿಸುತ್ತಿದ್ದಾರೆ, ಮಾಲೀಕರು, ಪಿಜಿ ವಾಸಿಗಳ ವೈಯಕ್ತಿಕ ವಿವರ ಪಡೆದಿರುವ ಬಗ್ಗೆ, ಸುರಕ್ಷತೆ, ವಾಣಿಜ್ಯ ಬಳಕೆಗೆ ವಿದ್ಯತ್, ವಾಣಿಜ್ಯ ತೆರಿಗೆ ಭರಿಸುತ್ತಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಬೇಕು. ಅನಧೀಕೃತ ಪಿಜಿಗಳಿಗೆ ತಕ್ಷಣ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು. ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಇತರರು ಇದ್ದರು.