ಜಿಲ್ಲೆ

ಪ.ಜಾತಿ ಕುಟುಂಬದವರು ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ: ಸಿಇಒ ಎಸ್.ಯುಕೇಶ್‌ಕುಮಾರ್

ಮೈಸೂರು: ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಪಟ್ಟಿಯಿಂದ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್‌ಕುಮಾರ್ ಹೇಳಿದರು.

ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಂಬಂಧ ರಚಿಸಲಾಗಿರುವ ಎಚ್.ಎನ್. ನಾಗಮೋಹನ್‌ದಾಸ್ ಸಮಿತಿಯ ಸಮೀಕ್ಷೆ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಯ ಜನರ ಸಮೀಕ್ಷೆಯನ್ನು ಮಾತ್ರ ಈಗ ನಡೆಸಲಾಗುತ್ತದೆ. ಸಮೀಕ್ಷೆದಾರರು ಸಮೀಕ್ಷೆಗೆ ಮನೆ ಮನೆಗೆ ಬಂದಾಗ ಪರಿಶಿಷ್ಟ ಜಾತಿಯ ಸದಸ್ಯರು ಸಹಕರಿಸಿ ಅಗತ್ಯ ಮಾಹಿತಿ ನೀಡಬೇಕು ಎಂದು ಕೋರಿದರು.

ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳನ್ನು ಗುರುತಿಸಲಾಗಿದೆ. ಮೂರು ಹಂತಗಳಲ್ಲಿ ಈ ಸಮೀಕ್ಷೆ ನಡೆಯಲಿದೆ. ಜಿಲ್ಲೆಯಿಂದ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಅನ್ನು ಆಯ್ಕೆ ಮಾಡಿ ತರಬೇತಿಗೆ ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿದೆ ಎಂದರು.

ಮೇ 5 ರಿಂದ 17ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಲಾಗುತ್ತಿದೆ. ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಮೇ 19 ರಿಂದ ಮೇ 21ರವರೆಗೆ ಹಾಗೂ ಅನ್‌ಲೈನ್ ಮೂಲಕ ಸ್ವಯಂ ಘೋಷಣೆಯನ್ನು ಮೇ 19 ರಿಂದ ಮೇ 23 ರವರೆಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಮೀಕ್ಷೆಯ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿದ ಗಣತಿದಾರರಿಗೆ ಕರ್ನಾಟಕ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಉಪಜಾತಿಗಳ ಮಾಹಿತಿಯನ್ನು ಮುಜುಗರಪಟ್ಟುಕೊಳ್ಳದೆ ನೀಡಬೇಕು ಎಂದು ಕೋರಿದರು. ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ನಮೂದಿಸಿದರೆ ಅಂಥವರು ಅದರ ಜತೆ ಉಪ ಜಾತಿಯನ್ನು ನಮೂದಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಒಳ ಜಾತಿಗಳಲ್ಲಿ ವಿವಿಧತೆ ಇದೆ. ಆದ್ದರಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣಕ್ಕೆ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು, ಆರ್ಥಿಕತೆ, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ , ಭೂಮಿಯ ಒಡೆತನ, ಮನೆ ಆದಾಯ ಮುಂತಾದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ತಿಳಿಸಿದರು.

ಮೊದಲನೇ ಹಂತ ಮನೆ ಮನೆ ಸಮೀಕ್ಷೆ, ಕ್ಯಾಂಪ್ ರೀತಿ ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆ ಹಾಗೂ ಆನ್‌ಲೈನ್ ರಿಜಿಸ್ಟ್ರೇಷನ್ ನಡೆಯುತ್ತದೆ. ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು. ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆ ಮಾಡಲಾಗುವುದು. ಸಮೀಕ್ಷೆಯಲ್ಲಿ ಆಧಾರ್ ಸಂಖ್ಯೆ, ಜಾತಿ ಸಂಖ್ಯೆ, ಮೊಬೈಲ್ ಸಂಖ್ಯೆ ಅಗತ್ಯ ಎಂದು ವಿವರಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.