ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಸಕ್ತ ಸಾಲಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ 78 ಗ್ರಾಮಗಳನ್ನು ಜಿಲ್ಲಾಡಳಿತದಿಂದ ಗುರುತಿಸಲಾಗಿದೆ. ತಹಸೀಲ್ದಾರ ಮತ್ತು ತಾಪಂ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಾಪಂ, ನಗರ ಸ್ಥಳಿಯ ಸಂಸ್ಥೆಗಳ ಕಚೇರಿಯಲ್ಲಿ ನೀರು, ಜಾನುವಾರು ಮೇವು ಸರಬರಾಜು ಕುರಿತ ದೂರು ಸ್ವೀಕರಿಸಿ ಕ್ರಮವಹಿಸಲು ಸಹಾಯವಾಣಿ ಆರಂಭಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಗಳ ಕುರಿತ ಪೂರ್ವ ಸಿದ್ಧತೆಗೆ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಧಾರವಾಡ ತಾಲೂಕಿನ 30 ಗ್ರಾಮಗಳಲ್ಲಿ, ಅಳ್ನಾವರ ತಾಲೂಕಿನ 4, ಹುಬ್ಬಳ್ಳಿಯ 19, ಕಲಘಟಗಿಯ 16, ಕುಂದಗೋಳದ 9 ಗ್ರಾಮಗಳಲ್ಲಿ ಯಾವ ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಿ ಸಮೀಕ್ಷೆ ಮಾಡಿ ಒಟ್ಟು 78 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.

ಮಾರ್ಚ್​ನಲ್ಲಿ 29, ಏಪ್ರಿಲ್​ನಲ್ಲಿ 26 ಮತ್ತು ಮೇ ತಿಂಗಳಲ್ಲಿ 23 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಯಾವುದೇ ಗ್ರಾಮದಲ್ಲಿ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಸಮಸ್ಯಾತ್ಮಕ ಗ್ರಾಮಗಳಲ್ಲಿ ಅಗತ್ಯಬಿದ್ದಾಗ ಕುಡಿಯುವ ನೀರು ಸರಬರಾಜಿಗೆ ಈಗಾಗಲೇ 162 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನಲ್ಲಿ ಮಲಪ್ರಭಾ ಕಾಲುವೆಯಿಂದ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದೆ. ನವಲಗುಂದ ತಾಲೂಕಿನ 37 ಕೆರೆಗಳು, ಅಣ್ಣಿಗೇರಿಯ 13, ಹುಬ್ಬಳ್ಳಿಯ 7 ಮತ್ತು ಕುಂದಗೋಳದ 3 ಸೇರಿ ಒಟ್ಟು 60 ಕೆರೆಗಳನ್ನು ಕಾಲುವೆ ನೀರಿನಿಂದ ತುಂಬಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 3,84,872 ಟನ್​ ಮೇವು ಲಭ್ಯವಿದೆ. ಸರಿಯಾದ ಕ್ರಮದಲ್ಲಿ ರಕ್ಷಿಸಿ, ಬೇಡಿಕೆಗೆ ತಕ್ಕಂತೆ ಸರಬರಾಜು ಮಾಡಬೇಕು. ಕುಡಿಯುವ ನೀರು ಸ್ವಚ್ಛವಾಗಿ ಇರುವಂತೆ ನಗರ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಖಾತರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುಪಾಲನೆ ಹಾಗೂ ಪಶು ವೈದ್ಯಕಿಯ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು, ಇದ್ದರು.

ಹಕ್ಕಿಜ್ವರ ಪತ್ತೆಯಾಗಿಲ್ಲ: ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣ ಕಂಡು ಬಂದಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಕೋಳಿ ಸಾಕಣಿಕೆದಾರರಿಗೆ ಸೂಕ್ತ ಮಾಹಿತಿ ನೀಡಿ, ಮುಂಜಾಗೃತೆ ವಹಿಸುವಂತೆ ಪಶುಪಾಲನೆ ಇಲಾಖೆ ಅಧಿಕಾರಿಗಳು ಸೂಚಿಸಬೇಕು. ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಳವಾಗುವ ಕುರಿತು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜನರಲ್ಲಿ ಈ ಕುರಿತು ಸುರಕ್ಷತಾ ಕ್ರಮವಹಿಸುವಂತೆ ಸೂಕ್ತ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ತಿಳಿಸಿದರು.