ಮುಂಡಗೋಡ: ಮೀಟರ್ ಬಡ್ಡಿ ಸಾಲ ನೀಡುವವರು ಪೊಲೀಸರಿಗೆ ಹೆದರಿ ಊರು ಬಿಟ್ಟಿದ್ದಾರೆ. ಯಾರಿಗಾದರೂ ಬಡ್ಡಿ ಸಾಲ ನೀಡಿದವರು ಕಿರುಕುಳ ನೀಡಿದರೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹೇಳಿದರು.
ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಅಪರಾಧ ಪ್ರಕರಣ ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಪೊಲೀಸರು ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ನೊಂದವರಿಗೆ ನ್ಯಾಯ ನೀಡಿದಾಗ ಮಾತ್ರ ನಾವು ಸಮವಸ್ತ್ರ ಧರಿಸಿದ್ದು ಸ್ವಾರ್ಥಕವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಇಸ್ಪೀಟ್ ಹಾಗೂ ಮಟ್ಕಾ ದಂಧೆಗಳಿಗೆ ಕಡಿವಾಣ ಹಾಕಲಾಗಿದೆ. ಆದರೂ ಕೆಲವೆಡೆ ಕದ್ದುಮುಚ್ಚಿ ದಂಧೆ ನಡೆಯುತ್ತಿವೆ. ಅಂತಹ ದಂಧೆಕೊರರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರೂ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಲ್ಲಿಯೂ ಜನ ಸಂಪರ್ಕ ಸಭೆ ನಡೆಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು. ಸಾಲ ಕೊಡುವುದು ಮತ್ತು ಪಡೆಯುವುದು ತಪ್ಪು. ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ಸಾಕಷ್ಟಿವೆ. ಅಲ್ಲಿ ಜನ ಸಾಲ ಪಡೆದುಕೊಳ್ಳಬೇಕು. ಮೀಟರ್ ಬಡ್ಡಿ ಸಾಲವನ್ನು ಪಡೆಯಲೇಬಾರದು. ತಾಲೂಕಿನ ಗಡಿ ಭಾಗಗಳಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತವೆ ಎಂಬ ಮಾಹಿತಿಯಿದ್ದು, ಸಂಪೂರ್ಣ ಕಡಿವಾಣ ಹಾಕಬೇಕು ಎಂದರು.
ಪೊಲೀಸ್ ಠಾಣೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಏಜೆಂಟರ ಬಗ್ಗೆ ಪೊಲೀಸರು ಸೂಕ್ತ ಕ್ರಮ ವಹಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯ ಎದುರು ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ಬರುತ್ತದೆ. ಎಸ್‌ಸಿ, ಎಸ್‌ಟಿ ಕೇಸ್ ದಾಖಲಿಸುವಾಗ ಕೂಲಂಕಷವಾಗಿ ಪರಿಶೀಲಿಸಬೇಕು. ಸುಳ್ಳು ಕೇಸ್ ದಾಖಲಿಸುವ ಜನರ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ಸಮಸ್ಯೆಗಳ ಕುರಿತು ವಿವಿಧ ಸಂಘಟನೆ ಮುಖಂಡರು, ಸಾರ್ವಜನಿಕರು ಸಭೆಯಲ್ಲಿ ಮಾಹಿತಿ ನೀಡಿದರು. ಎಲ್ಲ ಸಮಸ್ಯೆ ಆಲಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಿರಸಿ ಡಿವೈಎಸ್‌ಪಿ ಗಣೇಶ ಕೆ.ಎಲ್, ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಪರಶುರಾಮ ಮಿರ್ಜಗಿ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಮಂಜುನಾಥ ಪಾಟೀಲ, ಎಸ್.ಫಕೀರಪ್ಪ, ಚಿದಾನಂದ ಹರಿಜನ, ಬಸವರಾಜ ಸಂಗಮೇಶ್ವರ, ಗುಡ್ಡಪ್ಪ ಕಾತೂರ, ರಹಿಮಾಬಾನು ಕುಂಕೂರ, ಹನ್ಮಂತಪ್ಪ ಆರೆಗೊಪ್ಪ ಇತರರಿದ್ದರು.