ಅರಕಲಗೂಡು: ನಾಯಿಗಳಿಂದ ಮಾತ್ರವಲ್ಲದೆ ಇತರ ಸಾಕು ಪ್ರಾಣಿಗಳಿಂದಲೂ ರೇಬಿಸ್ ಬರುವ ಸಾಧ್ಯತೆಯಿದ್ದು, ಸಾಕು ಪ್ರಾಣಿಗಳ ಜತೆ ಇರುವಾಗ ಎಚ್ಚರಿಕೆ ಅಗತ್ಯ ಎಂದು ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎ.ಡಿ.ಶಿವರಾಮ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯುಎಸಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ರೇಬಿಸ್ ಕಾಯಿಲೆ ತಡೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣಿಗಳು ಕಚ್ಚಿದಾಗ ತಕ್ಷಣ 15 ನಿಮಿಷದೊಳಗೆ ಕಾರ್ಬೋಲಿಕ್ ಸೋಪು, ಡೆಟಾಲ್ ಸೋಪು ಅಥವಾ ಬಟ್ಟೆ ಸೋಪುಗಳಿಂದ ಚೆನ್ನಾಗಿ ತೊಳೆಯಬೇಕು. ನಂತರ ನಲ್ಲಿ ನೀರನ್ನು ಬಿಟ್ಟು ಕನಿಷ್ಠ ಎರಡರಿಂದ ಮೂರು ನಿಮಿಷ ತೊಳೆದರೆ ವೈರಸ್ ಪ್ರಮಾಣ ಶೇ.90 ರಷ್ಟು ಕಡಿಮೆ ಯಾಗುತ್ತದೆ. ಯಾವುದೇ ಕಾರಣಕ್ಕೂ ಮೆಣಸಿನಪುಡಿ, ಅರಿಶಿನಪುಡಿ, ಕಾಫಿಪುಡಿ ಹಾಕುವ ಸ್ವಯಂ ವೈದ್ಯಕ್ಕೆ ಮುಂದಾಗದೆ ತಜ್ಞ ವೈದ್ಯರ ಸಲಹೆ ಪಡೆದು ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ರೇಬಿಸ್ ಬಗ್ಗೆ ಜನಸಾಮಾನ್ಯರಲ್ಲಿ ಇರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಹಾಗೂ ಪ್ರೇರಣಾ ಮೆಂಟರ್‌ಶಿಪ್ ಉಪಕ್ರಮದ ಸಂಚಾಲಕಿ ಸಿ.ಆರ್.ಪಾರ್ವತಮ್ಮ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಸಿದ್ದರಾಜು, ಪ್ರಸನ್ನ, ಎ.ಎಲ್.ಮಂಜುನಾಥ್ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.