ಹುಣಸೂರು: ಸಮಾಜದಲ್ಲಿ ಪಾಲಕರು ಮತ್ತು ಅಧ್ಯಾಪಕರು ತಲೆತಗ್ಗಿಸುವಂತಹ ಪರಿಸ್ಥಿತಿ ಬಾರದಂತೆ ವಿದ್ಯಾರ್ಥಿಗಳು ನಡವಳಿಕೆ ರೂಪಿಸಿಕೊಳ್ಳಬೇಕೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಮತ್ತು ರೆಡ್ ಕ್ರಾಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ಸಾಧಿಸಲು ಪಠ್ಯದಿಂದಾಚೆಗೂ ಸಾಕಷ್ಟು ಅವಕಾಶಗಳಿವೆ. ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರುತ್ತದೆ. ಕ್ರೀಡೆ, ಸಾಂಸ್ಕೃತಿಕ, ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹೊಂದಿರಲು ಸಾಧ್ಯವಿದೆ. ಪಠ್ಯೇತರ ಚಟುವಟಿಕೆಗಳನ್ನು ಕಾಲೇಜು ಶಿಕ್ಷಣದಲ್ಲಿ ಅಳವಡಿಸಿರುವ ಮೂಲ ಉದ್ದೇಶವೇ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಆಗಿದೆ. ಪದವಿ ಹಂತದಲ್ಲಿರುವ ನೀವು ಪಾಲಕರು ಮತ್ತು ವಿದ್ಯೆ ಕಲಿಸಿದ ಅಧ್ಯಾಪಕರಿಗೆ ಅಪಮಾನ, ನೋವುಂಟಾಗವಂತೆ ನಡೆದುಕೊಳ್ಳಬೇಡಿ. ಸಾಮಾಜಿಕ ಜಾಲತಾಣಗಳು ನಿಮ್ಮನ್ನು ನುಂಗುವ ಮೊದಲು ಎಚ್ಚರವಹಿಸಿರಿ. ಸಾಧಿಸುವ ಛಲ ನಿಮ್ಮಲ್ಲಿರಲಿ ಎಂದು ಹೇಳಿದರು.
ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಪ್ರೊ.ಬಿ.ವಿ.ವಸಂತಕುಮಾರ್ ಮಾತನಾಡಿ, ಪರೀಕ್ಷೆ ಎನ್ನುವುದು ನಿಮ್ಮ ಸಾಮರ್ಥ್ಯವನ್ನು ಪರಿಚಯಿಸಲು ಸಿಗುವ ಉತ್ತಮ ವೇದಿಕೆಯಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಿ. ಅಂಕಗಳಿಕೆಯೇ ಮುಖ್ಯವಾಗಬಾರದು. ಶೈಕ್ಷಣಿಕ ಪರೀಕ್ಷೆಯಲ್ಲಿ ಪಾಸಾಗಬಹುದು. ಆದರೆ ಜೀವನವೆಂಬ ಪರೀಕ್ಷೆಯಲ್ಲಿ ಪಾಸಾಗಲು ಧನಾತ್ಮಕವಾದ ದೃಷ್ಟಿ, ಪ್ರಯತ್ಮ ಮತ್ತು ನಿರ್ವಹಣೆ ಅಗತ್ಯವಿದ್ದು, ಅದನ್ನು ಪಾಲಿಸುವುದು ನಿಮ್ಮ ಕರ್ತವ್ಯವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಸ್.ಮಂಜು ಮಾತನಾಡಿದರು. 2024-25ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ಆರ್.ಬಸವಲಿಂಗಸ್ವಾಮಿ, ಎನ್‌ಎಸ್‌ಎಸ್ ಸಂಚಾಲಕ ಡಾ.ಕೆ.ಪಿ.ಪ್ರಸನ್ನ, ರೆಡ್‌ಕ್ರಾಸ್ ಸಂಚಾಲಕ ಡಾ.ಕಲಾಶ್ರೀ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸಂಚಾಲಕಿ ಡಾ.ಸಿ.ಎನ್.ಕಾವ್ಯಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎನ್.ಪಿ.ಆರ್.ಕೇಸರ್‌ಕರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.