ಜಿಲ್ಲೆ

ಜ್ಞಾನದೊಂದಿಗೆ ಗುಣವಂತರಾಗಿ

ತುಮಕೂರು ಡೆಸ್ಕ್

ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು, ತಾಲೂಕು ನೌಕರರ ಸಮಾವೇಶ ಉದ್ಘಾಟನೆ

ಕೊರಟಗೆರೆ: ಮಕ್ಕಳು ಕೇವಲ ವಿದ್ಯಾವಂತರಾಗುವುದು ಮುಖ್ಯವಲ್ಲ, ಸಮಾಜದಲ್ಲಿ ಗುಣವಂತರಾಗಿ ಬದುಕಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಿದ್ದರಬೆಟ್ಟದ ಮಠದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಟಕದಿಂದ ಹಮ್ಮಿಕೊಂಡಿದ್ದ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಣ ಮತ್ತು ಅಧಿಕಾರ ಎಂದೂ ಶಾಶ್ವತವಾಗಿ ಉಳಿಯುವುದಿಲ್ಲ. ಜೀವನದಲ್ಲಿ ಯಾರೊಬ್ಬರೂ ಹಣದ ಹಿಂದೆ ಹೋಗಬಾರದು. ಉತ್ತಮ ನಡೆ, ನುಡಿ ಕಲಿತರೆ ನಮ್ಮ ಮೌಲ್ಯ ಹೆಚ್ಚುತ್ತದೆ ಎಂಬುದನ್ನು ಎಂದೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಡಯಟ್​ ಉಪನ್ಯಾಸಕ ಐ.ಎಸ್​.ಮಹೇಶ್​ ಮಾತನಾಡಿ, ನಮ್ಮಲ್ಲಿ ಪ್ರತಿಭೆ ಇದ್ದರೆ ಸಮಾಜ ನಮ್ಮನ್ನು ಗುರುತಿಸುತ್ತದೆ. ಪಾಲಕರು ಮಕ್ಕಳಿಗೆ ಓದಲು ಅನುಕೂಲ ವಾತಾವರಣ ಸೃಷ್ಟಿ ಮಾಡಿಕೊಡಬೇಕು. ಆದರೆ, ಇದನ್ನೇ ಓದಬೇಕು ಎನ್ನುವ ಒತ್ತಡ ಹಾಕಬೇಡಿ. ಅವರ ಆಸಕ್ತಿಗೆ ಅನುಗುಣವಾಗಿ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಡಾ.ಕೆ.ಎಲ್​.ದರ್ಶನ್​ ಮಾತನಾಡಿ, ಲಿಂಗಾಯತ ಸಮಾಜದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಹ ವಿದ್ಯಾರ್ಥಿಗಳ ಸಂಖ್ಯೆ ಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಐಎಎಸ್​, ಐಪಿಎಸ್​ನಂತಹ ಉನ್ನತ ಪರೀಕ್ಷೆಗಳನ್ನು ಎದುರಿಸಿ ಸಮಾಜದ ಪ್ರಗತಿಗೆ ಪೂರಕವಾಗಬೇಕು. ಸಮಾಜ ಇಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಮತ್ತು ನಿವೃತ್ತ ನೌಕರರಿಗೆ ಅಭಿನಂದನೆ ಸಲ್ಲಿಸಲಾಯಿತು.

ಉತ್ತಮ ನಡತೆ ರೂಢಿಸಿಕೊಳ್ಳಿ: ಮನುಷ್ಯನಲ್ಲಿರುವ ಪ್ರಾಮಾಣಿಕತೆ ಮತ್ತು ನಂಬಿಕೆಗಳು ನಮ್ಮನ್ನು ಉತ್ತುಂಗದಲ್ಲಿ ನಿಲ್ಲಿಸಿ, ಮೌಲ್ಯವನ್ನು ಹೆಚ್ಚಿಸುತ್ತದೆ. ಕೇವಲ ಅಂಕ ಗಳಿಸುವುದಷ್ಟೇ ಮುಖ್ಯ ಎಂದು ಭಾವಿಸದೆ, ವಿದ್ಯಾರ್ಥಿಗಳು ಉತ್ತಮ ನಡತೆಯನ್ನು ಬದುಕಿನಲ್ಲಿ ರೂಡಿಸಿಕೊಳ್ಳಬೇಕು. ಆ ಮೂಲಕ ಹಿರಿಯರ ಮತ್ತು ಪಾಲಕರ ಅನುಭವದ ಮಾತುಗಳನ್ನು ತಪ್ಪದೇ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಹದಿನೈದು ವರ್ಷಗಳಿಂದ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಸಂಘಕ್ಕೆ ನಿವೇಶನ ಮತ್ತು ಕಟ್ಟಡದ ಅವಶ್ಯಕತೆ ಇದ್ದು, ಸಮಾಜದ ಪ್ರಮುಖರು ಇದಕ್ಕೆ ಸಹಕಾರ ನೀಡಬೇಕು.
ಕಾಳಪ್ಪ ಕೊರಟಗೆರೆ ವೀರಶೈವ ಲಿಂಗಾಯತ ನೌಕರರ ಸಂದ ಅಧ್ಯಕ್ಷ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ವೀರಭದ್ರಯ್ಯ, ಮಹಿಳಾ ಅಧ್ಯೆ ಚಂದ್ರಕಲಾ ಲೋಕೇಶ್​, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್​, ಮುಖಂಡರಾದ ಎಲ್​.ರಾಜಣ್ಣ, ಕೆ.ಬಿ.ಲೋಕೇಶ್​, ಎಎಸ್​ಐ ಮಂಜುನಾಥ್​, ಖಜಾನೆ ಇಲಾಖೆಯ ಓಂಕಾರ್​, ಆರೋಗ್ಯ ಇಲಾಖೆಯ ವೀರೇಶ್​, ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಜಗದೀಶ್​, ಖಜಾಂಚಿ ಕೆ.ಆರ್​.ಕಿರಣ್​ ಹಾಗೂ ಪದಾಧಿಕಾರಿಗಳು ಇದ್ದರು.