ಮೈಸೂರು: ಮಾದಕ ವಸ್ತುಗಳ ಬಗ್ಗೆ ನಮಗೆ ಅರಿವಿರಬೇಕು. ಮಾದಕ ವಸ್ತುಗಳ ಹಂಚಿಕೆ, ಮಾರಾಟ ಮೊದಲಾದವುಗಳ ಬಗ್ಗೆ ಜಾಗೃತರಾಗಿ ಇತರರಿಗೂ ಅರಿವು ಮೂಡಿಸಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ಹರೀಶ್ ಹೇಳಿದರು.
ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವ್ಯಸನಿಗಳು ಮನಸ್ಸಿನ ಸ್ಥಿಮಿತತೆಯನ್ನು ಕಳೆದುಕೊಂಡು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಆ ಮೂಲಕ ಸಮಾಜದ ನಡುವೆ ಅಂತರವನ್ನು ಕಾಯ್ದುಕೊಳ್ಳುತ್ತಾ ಹೋಗುತ್ತಾರೆ. ಇಂದಿನ ಯುವ ಜನಾಂಗ ಮಾದಕ ವಸ್ತುಗಳ ಅರಿವಿಲ್ಲದೆ ಅದರ ಅನುಭವ ಪಡೆಯಲು ಬಳಸಿ ನಂತರದಲ್ಲಿ ಅವುಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಮಾದಕ ವಸ್ತುಗಳನ್ನು ಪೂರೈಸುವ ಜಾಲವು ನಾನಾ ರೀತಿಯಲ್ಲಿ ಸಮಾಜದಲ್ಲಿ ಕೆಲಸ ಮಾಡುತ್ತದೆ. ಅವುಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ಮಾದಕ ವಸ್ತುಗಳ ಮಾರಾಟ ಮತ್ತು ಹಂಚಿಕೆಯ ಜಾಲದ ಬಗ್ಗೆ ತಿಳಿದಲ್ಲಿ ಕೂಡಲೇ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಬೇಕು. ಮಾಹಿತಿ ತಿಳಿಸಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ಸಾಮಾಜಿಕ ಪಿಡುಗಾಗಿದೆ. ಅದು ಯುವ ಜನಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಯುನೈಟೆಡ್ ನೇಷನ್‌ನ ಪ್ರಕಾರ ಪ್ರಪಂಚದಾದ್ಯಂತ ಸುಮಾರು 300 ಮಿಲಿಯನ್ ಜನರು ಅಕ್ರಮವಾಗಿ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಮಾದಕ ವ್ಯಸನವು ದೇಶದ ಆರೋಗ್ಯ, ಆಡಳಿತ ಮತ್ತು ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು. ದೇಶವು ಮಾದಕ ವಸ್ತುಗಳಿಂದ ಮುಕ್ತವಾಗುವಂತೆ ಮಾಡುವುದು ನಮ್ಮಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ.ಪ್ರಭು, ಡಾ. ಬಿ.ಎಸ್. ಸುದೀಪ್ ಇದ್ದರು.