ಮುಂಡರಗಿ: ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜತೆಗೆ ಕ್ರೀಡಾಸಕ್ತಿ ಹೊಂದಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ 2023-24ನೇ ಸಾಲಿನ ಅಂತರ್ ಮಹಾವಿದ್ಯಾಲಯಗಳ ಏಕವಲಯ ಮಟ್ಟದ ಪುರುಷರ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜ್‌ನ ಅಭಿವೃದ್ಧಿಗಾಗಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುವುದು. ಕಾಲೇಜ್‌ಗೆ ತಡೆಗೋಡೆ ನಿರ್ಮಾಣ, ವಿದ್ಯಾರ್ಥಿಗಳಿಗಾಗಿ ಬಸ್ ನಿಲ್ದಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಮಹಿಳಾ ಖೋಖೋದಲ್ಲಿ ಭಾಗವಹಿಸಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಕಾಲೇಜ್‌ನ ವಿದ್ಯಾರ್ಥಿನಿ ಸ್ವಪ್ನಾ ಕೌಲಿ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ 10 ಮಹಾವಿದ್ಯಾಲಯದ ತಂಡಗಳು ಭಾಗವಹಿಸಿದ್ದವು.
ಕಾಲೇಜ್ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ಆರ್.ಎಸ್. ಪಾಟೀಲ, ಆನಂದ ನಾಡಗೌಡ್ರ, ಹೇಮಂತಗೌಡ ಪಾಟೀಲ, ಎಸ್.ಎಸ್. ಗಡ್ಡದ, ರುದ್ರಗೌಡ ಪಾಟೀಲ, ಎಚ್. ವಿರೂಪಾಕ್ಷಗೌಡ್ರ, ಸುರೇಶ ಜೈನ್, ರಾಮಚಂದ್ರ ಕಲಾಲ, ಶ್ರೀನಿವಾಸ ಕಟ್ಟಿಮನಿ, ದೇವಪ್ಪ ರಾಮೇನಹಳ್ಳಿ, ಅರುಣಾ ಪಾಟೀಲ, ಶಿವಯೋಗಿ ಎಲಿ, ಡಾ.ನಾಗರಾಜ ಹಾವಿನಾಳ, ಎಸ್.ಆರ್.ಚಿಗರಿ, ಪ್ರಕಾಶ ಪೂಜಾರ ಉಪಸ್ಥಿತರರು ಇದ್ದರು. ಹರ್ಷಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ಎಂ.ಡಿ. ನಾಯಕ ಸ್ವಾಗತಿಸಿದರು. ಅಕ್ಕಮಹಾದೇವಿ ಹಿರೇಮಠ ನಿರೂಪಿಸಿದರು. ಉಮಾ ಕೊಳ್ಳಿ ವಂದಿಸಿದರು.