ಸೋಲಾಪುರ ರಸ್ತೆಯ ಟೋಲ್‌ಗೇಟ್ ಸಮೀಪದ ಬೊಮ್ಮನಹಳ್ಳಿಯ ಗುರುದೇವಾಶ್ರಮದಲ್ಲಿ ಸಿದ್ಧೇಶ್ವರ ಶ್ರೀಗಳು ವಿರಮಿಸುತ್ತಿದ್ದ ಸ್ಥಳವನ್ನು ಮೈಸೂರಿನ ಸುತ್ತೂರು ಮಠದ ದೇಶಿಕೇಂದ್ರ ಜಗದ್ಗುರುಗಳು ವೀಕ್ಷಿಸಿದರು. ಜ್ಞಾನಯೋಗಾಶ್ರಮದ ಅಧ್ಯಕ್ಷ ಪರಮಪೂಜ್ಯ ಬಸವಲಿಂಗ ಸ್ವಾಮಿಗಳು, ಹರ್ಷಾನಂದ ಸ್ವಾಮಿಗಳು, ಅಮೃತಾನಂದ ಶ್ರೀಗಳು, ವಿಠ್ಠಲಗೌಡ ಬಿರಾದಾರ ಇತರರಿದ್ದಾರೆ. 
ಜಿಲ್ಲೆ

ಉದ್ಯೋಗಿಯಾಗದೆ ಉದ್ಯೋಗದಾತರಾಗಿ

ಗಿರೀಶ ಸಗರ

ವಿಜಯಪುರ: ಪ್ರಗತಿಪರ ರೈತರಾದ ವಿಠ್ಠಲಗೌಡ ಬಿರಾದಾರ ಕುಟುಂಬವು ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗ ಕೊಟ್ಟು, ರೈತರು ಬೆಳೆದ ಬೆಳೆಗಳಿಗೆ ಮೌಲ್ಯಾಧಾರಿತ ಬೆಲೆ ದೊರಕಿಸಿಕೊಡುವುದರ ಜೊತೆಗೆ ಸಿದ್ಧೇಶ್ವರ ಶ್ರೀಗಳ ಆಶಯದಂತೆ ಸಾಧನೆ ಮಾಡಿದ್ದಾರೆ ಎಂದು ಮೈಸೂರಿನ ಸುತ್ತೂರು ಮಠದ ದೇಶಿಕೇಂದ್ರ ಜಗದ್ಗುರುಗಳು ಹೇಳಿದರು.

ಸೋಲಾಪುರ ರಸ್ತೆಯ ಟೋಲ್‌ಗೇಟ್ ಸಮೀಪದ ಗುರುದೇವಪುರದಲ್ಲಿರುವ ಕೋಲ್ಡ್ ಚೈನ್ ಸ್ಟೋರೇಜ್, ವಿಆರ್‌ಬಿ ಎಕ್ಸ್‌ಪೋರ್ಟ್ಸ್ ಕೈಗಾರಿಕಾ ಘಟಕದ ಉದ್ಘಾಟನೆ ನೆರವೇರಿಸಿ ಶ್ರೀಗಳು ಮಾತನಾಡಿ, ಈ ಉದ್ದಿಮೆಗಳ ಸ್ಥಾಪನೆಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ವೃದ್ಧಿಯಾಗುವುದರೊಂದಿಗೆ, ರೈತರು ಬೆಳೆದ ದ್ರಾಕ್ಷಿಗೆ ಉತ್ತಮ ಬೆಲೆಯೂ ದೊರೆಯುತ್ತದೆ.

ಗ್ರಾಹಕರಿಗೆ ಉತ್ಕೃಷ್ಟ ಮಟ್ಟದ ಒಣದ್ರಾಕ್ಷಿ ದೊರೆಯುತ್ತದಲ್ಲದೇ, ರಫ್ತು ಆಧಾರಿತ ಒಣದ್ರಾಕ್ಷಿಯ ಕೈಗಾರಿಕಾ ಘಟಕ ವ್ಯಾಪಾರವೂ ವೃದ್ಧಿಯಾಗುತ್ತದೆ ಎಂದರು.

ನಂತರ ಬೊಮ್ಮನಹಳ್ಳಿಯಲ್ಲಿರುವ ಗುರುದೇವಾಶ್ರಮಕ್ಕೆ ಭೇಟಿ ನೀಡಿ ನಡೆದಾಡುವ ದೇವರು ಲಿಂ. ಸಿದ್ಧೇಶ್ವರ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದ ಜಾಗವನ್ನು ವೀಕ್ಷಿಸಿ, ಆಶ್ರಮದ ಆವರಣದಲ್ಲಿ ಬೆಳೆಯಲಾಗಿದ್ದ ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ವನಸ್ಪತಿ, ಗಿಡಮೂಲಿಕೆ, ಹಣ್ಣಿನ ಗಿಡಗಳು, ಹೂವಿನ ಗಿಡಗಳನ್ನು ಅವಲೋಕಿಸಿ, ಈ ಜಾಗದಲ್ಲಿ ಸಿದ್ಧೇಶ್ವರ ಶ್ರೀಗಳು ಹೇಳುತ್ತಿದ್ದಂತೆ ಬಯಲು, ನಿಸರ್ಗ, ಮೌನ, ಧ್ಯಾನ ಎಲ್ಲವೂ ಇಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗುರುದೇವಪುರದ ನಾಮಕರಣ ಫಲಕವನ್ನು ಸುತ್ತೂರು ಶ್ರೀಗಳು ಉದ್ಘಾಟಿಸಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಪರಮಪೂಜ್ಯ ಬಸವಲಿಂಗ ಸ್ವಾಮಿಗಳು, ಹರ್ಷಾನಂದ ಸ್ವಾಮಿಗಳು, ಅಮೃತಾನಂದ ಶ್ರೀಗಳು, ಕನ್ಹೇರಿ ಮಠದ ಶರಣರು, ಮೈಸೂರಿನ ಹಲವು ಶರಣರು ಉಪಸ್ಥಿತರಿದ್ದರು. ಸುತ್ತೂರು ಜಗದ್ಗುರುಗಳಿಗೆ ಪಾದಪೂಜೆ ಮಾಡಲಾಯಿತು.ಪ್ರಮುಖರಾದ ಪಂಚಪ್ಪ ಕಲಬುರ್ಗಿ, ನವೀನ ರೆಡ್ಡಿ, ಎ.ಕೆ. ದಾಶ್ಯಾಳ, ಗುರುಶಾಂತಯ್ಯ ವಸ್ತ್ರದ, ವಿಶ್ರಾಂತ ಪಿಡಿಜೆ ಬಿ.ಸಿ. ಬಿರಾದಾರ, ವಕೀಲರಾದ ಎಸ್.ವಿ. ಪಾಟೀಲ, ಸಂಗು ಸಜ್ಜನ, ಮಹಾದೇವಪ್ಪ, ತುಕಾರಾಮ, ಶಿವಾನಂದ, ಸಂಗಮೇಶ ಬಿರಾದಾರ, ಸಂಜಯ ಪಾಟೀಲ, ಮಂಜುನಾಥ ಪಾಟೀಲ, ಅಂಬಿಕಾ ಪಾಟೀಲ, ಸರ್ವಶ್ರೀ ಪಾಟೀಲ ಇತರರಿದ್ದರು.