ಯಶವಂತಪುರ: ಸಾರ್ವಜನಿಕರು ತಮ್ಮ ಮನೆಗಳಲ್ಲೇ ಇದ್ದು ಕರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ ಸಮಾಜದ ಆರೋಗ್ಯಕ್ಕೆ ಸಹಕರಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮನವಿ ಮಾಡಿದ್ದಾರೆ.
ಮಾಗಡಿ ರಸ್ತೆ ಹೇರೋಹಳ್ಳಿಯ ಶಾಸಕರ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಡವರು, ಕಟ್ಟಡ ಕಾರ್ವಿುಕರು, ಕೂಲಿ ಕಾರ್ವಿುಕರಿಗೆ ಆಹಾರ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತಿ ವಾರ್ಡ್ಗೆ 10 ಸ್ವಯಂಸೇವಕರನ್ನು ನೇಮಿಸಿ ದಿನದ 24 ಗಂಟೆ ಕಾಲ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಜನರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಶಾಂತಿಯಿಂದ ಸಹಕರಿಸಬೇಕು ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾಗಿರುವ ಔಷಧವಿತರಣೆಗೆ ವಾಹನ ಸೌಲಭ್ಯ ದೊರಕಿಸಿಕೊಡಲಾಗು ವುದು. ಹಣ್ಣು, ಹೂವು, ತರಕಾರಿಗಳನ್ನು ಮಾರುಕಟ್ಟೆಗೆ ತರುವ ರೈತರಿಗೆ ಪೊಲೀಸರು ತೊಂದರೆ ಕೊಡಬಾರದು ಎಂದು ತಾಕೀತು ಮಾಡಿದರು.
ಕರೊನಾ ನಿಯಂತ್ರಣಕ್ಕೆ ಬಿಬಿಎಂಪಿ ಜಂಟಿ ಆಯುಕ್ತರು, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ನಿಮಗೆ ಬೇಕಾಗಿರುವ ಎಲ್ಲ ಸವಲತ್ತು ದೊರಕಿಸಿಕೊಡುತ್ತೇನೆ. ತುರ್ತು ಸಂದರ್ಭದಲ್ಲಿ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಸಚಿವರು ಸೂಚಿಸಿದರು.
ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ: ಕೆಲವು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು ಶನಿವಾರದಿಂದ ಎಂದಿನಂತೆ ತೆರೆಯಲಿವೆ. ಸಾರ್ವಜನಿಕರಿಗೆ ಅವು ಸ್ಪಂದಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಮಾಹಿತಿಯನ್ನು ಎಲ್ಲ ಆಸ್ಪತ್ರೆಗಳಿಗೆ ರವಾನಿಸಬೇಕು ಎಂದು ತಾಲೂಕು
ವೈದ್ಯಾಧಿಕಾರಿ, ಬಿಬಿಎಂಪಿ ಉಪ ಆರೋಗ್ಯಾಧಿ ಕಾರಿಗಳಿಗೆ ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ಡಾ. ಶಿವಣ್ಣ ಸೂಚಿಸಿದರು.
ಪಾಲಿಕೆ ಜಂಟಿ ಆಯುಕ್ತ ಡಿ.ಎನ್. ಜಗದೀಶ್, ಕಾಪೋರೇಟರ್ ರಾಜಣ್ಣ, ಮುಖ್ಯ ಇಂಜಿನಿಯರ್ ವಿಜಯ್ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ವಾಹನ ಸೌಕರ್ಯ ಒದಗಿಸಿ
ಬ್ಯಾಡರಹಳ್ಳಿ ಠಾಣೆಗೆ 2 ಜೀಪ್, 6 ಹೊಯ್ಸಳ ವಾಹನಗಳ ಅಗತ್ಯವಿದ್ದು, ಖಾಸಗಿ ವಾಹನವನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಠಾಣಾ ಆಧಿಕಾರಿ ಎ. ರಾಜೀವ್ ತಿಳಿಸಿದರು. ‘ನಮ್ಮಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಸ್ಪತ್ರೆಗಳಲ್ಲಿ ವಾಹನದ ಸೌಲಭ್ಯವಿಲ್ಲ. ಸರ್ಕಾರದಿಂದ ವಾಹನ ಸೌಕರ್ಯ ದೊರಕಿಸಿಕೊಡಿ’ ಎಂದು ಸಚಿವರಲ್ಲಿ ಬಿಬಿಎಂಪಿ ಉಪ ಆರೋಗ್ಯಾಧಿಕಾರಿ ಡಾ. ಮನೊರಂಜನ್ ಹೆಗಡೆ, ದಕ್ಷಿಣ ತಾಲೂಕು ಆರೋಗ್ಯಾಧಿಕಾರಿ ಡಾ.ಧನ್ಯಾ ಮನವಿ ಮಾಡಿದರು. ಶೀಘ್ರವೇ ವಾಹನ ದೊರಕಿಸಿಕೊಡುವುದಾಗಿ ಉಪ ವಿಭಾಗಾಧಿಕಾರಿ ಡಾ. ಶಿವಣ್ಣ ಭರವಸೆ ನೀಡಿದರು.