ಜಿಲ್ಲೆ

ಕೋವಿಡ್ ಭಯ ಬಿಡಿ.. ಪರೀಕ್ಷೆಗೆ ಬನ್ನಿ

Gadag

ರೋಣ: ಭಯ ಬಿಟ್ಟಾಕಿ… ದಯಮಾಡಿ ಕೋವಿಡ್ ಪರೀಕ್ಷೆಗೆ ಬನ್ನಿ..
ಇದು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ತಾಲೂಕಿನ ಹಿರೇಮಣ್ಣೂರ ಗ್ರಾಮದ ಮನೆಗಳ ಮುಂದೆ ನಿಂತು ಜನರನ್ನು ಕರೆಯುತ್ತಿರುವ ಪರಿ ಇದು.
ಶುಕ್ರವಾರದ ರ್ಯಾಪಿಡ್ ಪರೀಕ್ಷೆಯಲ್ಲಿ ಗ್ರಾಮದ 50ರಲ್ಲಿ 19 ಮಂದಿಗೆ ಪಾಸಿಟಿವ್ ಬಂದಿದೆ. ಹೀಗಾಗಿ, ಆರೋಗ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡು ಗ್ರಾಮದ ಎಲ್ಲರನ್ನು ಪರೀಕ್ಷೆ ಮಾಡುತ್ತಿದ್ದಾರೆ. ಆದರೆ, ಕೆಲವರು ಭಯದಿಂದ ಮನೆಯಿಂದ ಹೊರಗೆ ಬರುತ್ತಿಲ್ಲ.
ಇದು ಹಿರೇಮಣ್ಣೂರ ಗ್ರಾಮದ ಪರಿಸ್ಥಿತಿ ಮಾತ್ರವಲ್ಲದೆ, ತಾಲೂಕಿನ 52ರಲ್ಲಿ 49 ಹಳ್ಳಿಗಳ ಚಿತ್ರಣ. ಊರ ತುಂಬೆಲ್ಲ ಸೋಂಕು ಹಬ್ಬಿದೆ. ಪರೀಕ್ಷೆಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಜೀವ ಭಯದಲ್ಲಿ ಯುವಕರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಯತ್ತ ಧಾವಿಸಿದರೆ ಲಸಿಕೆ ಸಿಗುತ್ತಿಲ್ಲ. ಇನ್ನು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಟಾಕ್ ಇದ್ದರೂ ಸದ್ಯ ಗ್ರಾಮೀಣ ಭಾಗದಿಂದ ಬರಲು ಬಸ್ ಸೇವೆ ಇಲ್ಲ. ವಯಸ್ಸಾದವರು ದೂರದ ಊರಿಗೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕೆಂದರೆ ಖಾಸಗಿ ವಾಹನ ಮಾಡಿಕೊಂಡು ಬರಬೇಕು. ಅದಕ್ಕೆಲ್ಲಿ ಬಾಡಿಗೆ ಕೊಡುವುದು ಯಾವಾಗಾದರೂ ಹೋದಾಗ ಲಸಿಕೆ ಹಾಕಿಸಿಕೊಂಡರಾಯಿತು ಎಂಬ ನಿರ್ಲಕ್ಷ್ಯೋರುತ್ತಿದ್ದಾರೆ.

ಹಿರೇಮಣ್ಣೂರ ಗ್ರಾಮದಲ್ಲಿ ಶುಕ್ರವಾರ ನಡೆದ ರ್ಯಾಪಿಡ್ ಪರೀಕ್ಷೆಯಲ್ಲಿ 50ರಲ್ಲಿ 19 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಒಬ್ಬರು ಮೃತಪಟ್ಟಿದ್ದಾರೆ. ಶನಿವಾರ ಮತ್ತೆ 50 ಜನರಿಗೆ ರ್ಯಾಪಿಡ್ ಪರೀಕ್ಷೆ ಮಾಡಿದ್ದೇವೆ. ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ.| ಡಾ. ಅರವಿಂದ ಕಂಬಳಿ, ಸವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ