ಬೀರೂರಲ್ಲಿ ಆಯೋಜಿಸಿದ್ದ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಡಾ.ಲವ.ಜಿ.ಆರ್ ಉದ್ಘಾಟಿಸಿದರು.  
ಜಿಲ್ಲೆ

ಕಲಿಕೆ ಜತೆಗೆ ಸಂಸ್ಕಾರ ಕಲಿತು ಮಾದರಿಯಾಗಿ

ಬೀರೂರು: ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ನಕಾರಾತ್ಮಕ ಒತ್ತಡದ ನಡುವೆಯೂ ಸಾಂಸ್ಕೃತಿಕ ಮತ್ತು ಕಲಾ ವೈಭವದ ಮಹತ್ವವನ್ನು ಉಳಿಸಿ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಡಾ.ಲವ ಹೇಳಿದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2023-24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಯೂತ್ ರೆಡ್‌ಕ್ರಾಸ್, ರೋವರ್ಸ್‌ ಮತ್ತು ರೇಂಜರ್ಸ್‌ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ದಿನಗಳು ನಮ್ಮ ಜೀವನದಲ್ಲಿ ಎಂದು ಮರೆಯಲಾಗದ ಅನುಭವ ನೀಡುತ್ತವೆ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಪಾಲಕರ ಕನಸು ನನಸು ಮಾಡಬೇಕು. ವಿದ್ಯಾರ್ಥಿಗಳು ಉತ್ತಮ ಕಲಿಕೆ ಜತೆ ಒಳ್ಳೆಯ ಸಂಸ್ಕಾರ ಕಲಿತು ಮಾದರಿಯಾಗಬೇಕು. ಶೈಕ್ಷಣಿಕ ಚಟುವಟಿಕೆ ವೇಳೆ ತೊಡಕುಗಳು ಬಂದರೂ ನಮ್ಮ ಗುರಿ ಸಾಧನೆ ಕಡೆ ಇರಬೇಕು ಎಂದರು.
ಕಾಲೇಜು ಪ್ರಾಚಾರ್ಯ ಡಾ.ಪ್ರವೀಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ದಿನಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಾಲೇಜು ಹಾಗೂ ವೈಯಕ್ತಿಕ ಅಭಿವೃದ್ಧಿ ಜತೆಗೆ ಕಾಲೇಜಿಗೂ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಜಾನಪದ ಕಲಾವಿದ ಡಾ.ನಿಂಗರಾಜು ಮತ್ತು ತಂಡದವರು ಸುಮಧುರ ಜಾನಪದ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮುಬಾರಕ್.ಎನ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಮಲ್ಲಿಕಾರ್ಜುನ್, ಯೂತ್ ರೆಡ್‌ಕ್ರಾಸ್ ಸಂಸ್ಥೆ ಸಂಚಾಲಕ ಡಿ.ಸಿ.ಚಂದ್ರಶೇಖರ್ ಎಸ್.ಒ.ನಾಗೇಶ್, ಯು.ಧರಣೇಂದ್ರ ಪ್ರಭು, ಡಾ.ಮಂಜುಳ, ಶೋಭ ಇದ್ದರು.