ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂಸೆ, ವ್ಯಭಿಚಾರ, ದೈಹಿಕ ದುರಾಚಾರದಲ್ಲಿ ಕೆಲವರು ತೊಡಗಿಕೊಂಡು ತಾವೇ ಹಾಳಾಗುತ್ತಿದ್ದಾರೆ. ಇದರಿಂದ ದೂರ ಸರಿಯಲು ಬಸವಾದಿ ಶರಣ ಸಾಹಿತ್ಯ ಮನನ ಮಾಡಿಕೊಂಡು ಜೀವನ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮಂಜುನಾಥ ಅಡವೇರ ಅಭಿಪ್ರಾಯಪಟ್ಟರು.
ಶ್ರಾವಣ ಮಾಸ ನಿಮಿತ್ತ ನಗರದ ಆರ್ಎಲ್ಎಸ್ ಕಾಲೇಜಿನಲ್ಲಿ ಬಸವ ಕೇಂದ್ರ ವತಿಯಿಂದ ಶಾಲಾ ಮಕ್ಕಳಿಗೆ ಭಾನುವಾರ ಏರ್ಪಡಿಸಿದ್ದ ವಚನ ಕಂಠಪಾಠ ಲೇಖನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳನ್ನು ರಚಿಸಿದ್ದು, ಅವು ನಮ್ಮ ಬದುಕಿನ ದಾರಿ ದೀಪವಾಗಿವೆ. ವಿದ್ಯಾರ್ಥಿಗೆ ಬಸವಾದಿ ಶರಣರ ವಚನ ಸಾಹಿತ್ಯ, ಧಾಮಿರ್ಕತೆ, ವೈಚಾರಿಕತೆ, ಅರಿವಿನ ಜ್ಞಾನ ಕೊಟ್ಟಾಗ ಸಂಸ್ಕಾರ ಪಡೆದು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ತನ್ನ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುತ್ತಾನೆ ಎಂದರು.
ಆರ್.ಬಿ.ಬಾನಪ್ಪನವರ ಮಾತನಾಡಿ, ಶ್ರಾವಣ ಮಾಸ ಪವಿತ್ರ ಮಾಸ. ಈ ಸಮಯದಲ್ಲಿ ಮನೆ ಸದಸ್ಯರು ನಿತ್ಯ ಒಂದು ವಚನ ಓದಿ ಅದರ ಅರ್ಥ ತಿಳಿಸಿದರೆ ಮನೆಯಲ್ಲಿ ಸಂತಸದ ಹೊನಲು ಹರಿಯುತ್ತದೆ. ಮಕ್ಕಳಿಗೆ ಬುದ್ದಿ ಹೇಳಿ ತಿಳಿವಳಿಕೆ ನೀಡುವ ಬದಲು ವಚನ ಓದುವ ಬರೆಯುವ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಸಿದರೆ ಅವರಿಗೆ ಜೀವನ ಮೌಲ್ಯದ ಅರಿವು ಸಿಗುತ್ತದೆ ಎಂದರು.
ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎನ್.ಕರಿಗಾರ, ಶಕುಂತಲಾ ಮನ್ನಂಗಿ, ಇತರರು ಇದ್ದರು. 800ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು ವಚನ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೆ ಉಚಿತ ನೋಟಬುಕ್ ಹಾಗೂ ಜೀವನ ಮೌಲ್ಯ ಗ್ರಂಥ ವಿತರಿಸಲಾಯಿತು.