ಮೈಸೂರು: ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿ ಹಲವರು ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಆಗಬೇಕೆಂದು ಬಯಸಿದ್ದರು. ಹೀಗಾಗಿ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಮೂಲಕ ಅವರ ಕನಸುಗಳನ್ನು ಸಾಕಾರಗೊಳಿಸಬೇಕೆಂದು ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ 124 ಎಕರೆಯನ್ನು ಮಂಜೂರು ಮಾಡಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರ ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದಾಗಿ ಘೋಷಿಸಿತು. ಇದೀಗ ಬಿಜೆಪಿ ಸರ್ಕಾರ ರಾಮನಗರವನ್ನು ಕೈಬಿಟ್ಟು ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದೆಂದು ಘೋಷಿಸಿರುವುದು ಸ್ವಾಗತಾರ್ಹ.
ಕನ್ನಡ ಚಿತ್ರೋದ್ಯಮ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದು, ಈ ಬೆಳವಣಿಗೆಗೆ ಪೂರಕವಾಗಿ ಎರಡು ಚಿತ್ರನಗರಿಗಳ ಅವಶ್ಯಕತೆ ಇದೆ. ಆದರೆ, ಬೆಂಗಳೂರು ಚಿತ್ರನಗರಿ ನಿರ್ಮಾಣ ಸಂದರ್ಭ ಮೈಸೂರನ್ನು ಕಡೆಗಣಿಸಬಾರದೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಚಿತ್ರೋದ್ಯಮಕ್ಕೂ ಮೈಸೂರಿಗೆ ಅವಿನಾಭಾವ ನಂಟು ಇದೆ. 1946ರಲ್ಲಿ ತೆರೆಕಂಡ ಹಾಲಿವುಡ್‌ನ ಹ್ಯಾರಿ ಬ್ಲಾಕ್ ಟೈಗರ್ ಸಿನಿಮಾ ನಿರ್ಮಾಪಕ ಅಲೆಗ್ಸಾಂಡರ್ ಕೊರ್ಡ, ಸಿನಿಮಾ ಚಿತ್ರೀಕರಣಕ್ಕೆ ವಿಶ್ವದ ಶ್ರೇಷ್ಠ ತಾಣ ಮೈಸೂರು ಎಂದು ಬಣ್ಣಿಸಿದ್ದರು. ಹಾಲಿವುಡ್‌ನಲ್ಲಿ ಖ್ಯಾತಿಗಳಿಸಿದ ನಗರದ ಸಾಬು ಅವರು ಮೈಸೂರಿನಲ್ಲಿ ಸುಸಜ್ಜಿತವಾದ ಫಿಲಂ ಸ್ಟುಡಿಯೋ ಸ್ಥಾಪಿಸಬೇಕೆಂದು ಬಯಸಿದ್ದರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಚಿತ್ರನಗರಿ ನಿರ್ಮಾಣದ ಕುರಿತು ನಡೆದ ಚರ್ಚೆ ವೇಳೆ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಆಗಲಿ ಎಂದು ಡಾ.ರಾಜ್‌ಕುಮಾರ್ ಸಲಹೆ ನೀಡಿದ್ದರು.
ಅರಮನೆಗಳ ನಗರವಾದ ಮೈಸೂರು ಚಿತ್ರನಗರಿ ನಿರ್ಮಾಣಕ್ಕೆ ಸೂಕ್ತ ಸ್ಥಳ. ಮೈಸೂರು ಸುತ್ತಮುತ್ತ ಮೂವತ್ತು ಇತಿಹಾಸ ಪ್ರಸಿದ್ಧ ತಾಣಗಳಿವೆ. ಸುಂದರ ಉದ್ಯಾನಗಳು, ನದಿಗಳು, ಐತಿಹಾಸಿಕ ತಾಣಗಳು, ಜಲಪಾತ, ಬೆಟ್ಟಗುಡ್ಡಗಳು ಇವೆ.
ಕನ್ನಡ ಸಿನಿಮಾ ಜನ್ಮ ತಳೆದದ್ದೇ ಮೈಸೂರಿನಲ್ಲಿ ಎನ್ನುವುದು ಗಮನಾರ್ಹ ಸಂಗತಿ.
1929ರಲ್ಲಿಯೇ ಮೈಸೂರಿನ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕೈಯಿಂದ ಸುತ್ತಿ ಚಿತ್ರ ತೆಗೆಯುವ ಕ್ಯಾಮರಾದಿಂದ ‘ನಿರುಪಮಾ’ ಎಂಬ ನಾಟಕವನ್ನು ಯಥಾವತ್ತಾಗಿ ಚಿತ್ರೀಕರಿಸಿದ್ದರು. ಹೀಗಾಗಿ ಮೈಸೂರು ಅರಮನೆಯೇ ಮೊದಲ ಸ್ಟುಡಿಯೋ ಹಾಗೂ ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ಕನ್ನಡ ಸಿನಿಮಾ ನಿರ್ಮಾಪಕರು ಎನ್ನುವುದನ್ನು ಗಮನಿಸಬೇಕು. ಈ ಎಲ್ಲ ಹಿನ್ನೆಲೆಯನ್ನು ಗಮನಿಸಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.