ಹುಬ್ಬಳ್ಳಿ: ವಾಲ್ವ್ ತಯಾರಿಕೆಯಲ್ಲಿ ಜಾಗತಿಕ ನಕಾಶೆಯಲ್ಲಿ ಗುರುತಿಸಿಕೊಂಡಿರುವ ಬಿಡಿಕೆ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಮತ್ತೆ ಹುಬ್ಬಳ್ಳಿಯವರ ಪಾಲಾಗಿದೆ. ಬಹುರಾಷ್ಟ್ರೀಯ ಕಂಪನಿಯ ತೆಕ್ಕೆಗೆ ಸೇರಿದ್ದ ಹುಬ್ಬಳ್ಳಿಯ ಈ ಕಂಪನಿಯನ್ನು ಹುಬ್ಬಳ್ಳಿಯವರೇ ಆದ ಬಿಮಲ್ ಮೆಹ್ತಾ ಹಾಗೂ ಡಾ.ವಿ.ಎಸ್.ವಿ ಪ್ರಸಾದ ಮರು ಖರೀದಿ ಮಾಡಿದ್ದಾರೆ. ನಗರದ ಉದ್ಯಮಿ ಭರತ ಖಿಮ್ಜಿ ಸ್ಥಾಪಿಸಿದ ಈ ಕಂಪನಿಯನ್ನು 298.3 ಕೋಟಿ ರೂ.ಗಳಿಗೆ ವೈರ್ ಇಂಜಿನಿಯರಿಂಗ್ ಸರ್ವೀಸಸ್ 2010ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ನಂತರ ಅದನ್ನು ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿತ್ತು.
ಹುಬ್ಬಳ್ಳಿ ಮೂಲದ ಐಎಂಸಿ ಮತ್ತು ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ಜಂಟಿ ಉದ್ಯಮವಾದ ಐಎಂಸಿ ಸ್ವರ್ಣ ವೆಂಚರ್ಸ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯು ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಇಂಡಿಯಾ ಕಂಪನಿಯ ಶೇ. 100 ಷೇರುಗಳನ್ನು ಗುರುವಾರ ಖರೀದಿಸಿದೆ. ‘ಬಿಡಿಕೆ ವಾಲ್ವಸ್’ ಬ್ರ್ಯಾಂಡ್ ಅಡಿಯಲ್ಲಿ ಬಾಲ್ ವಾಲ್ವ್, ಬಟರ್ಫ್ಲೈ ವಾಲ್ವ್, ಡಯಾಫ್ರಾಮ್ ವಾಲ್ವ್, ಸುರಕ್ಷತಾ ಪರಿಹಾರ ಕವಾಟ ಮತ್ತು ಪ್ಲಗ್ ವಾಲ್ವ್ಗಳನ್ನು ತಯಾರಿಸುತ್ತಿದ್ದ ಮುಂಚೂಣಿ ಕಂಪನಿಯಾದ ಟ್ರಿಲಿಯಂ ಫ್ಲೋಟೆಕ್ನಾಲಜೀಸ್ ಇಂಡಿಯಾ ಪ್ರೖೆ.ಲಿ. ಕಂಪನಿಯ ಷೇರುಗಳನ್ನು ಯಶಸ್ವಿಯಾಗಿ ಖರೀದಿಸಿರುವುದಾಗಿ ಐಎಂಸಿ ಸ್ವರ್ಣ ವೆಂಚರ್ಸ್ ಘೋಷಿಸಿದೆ. ದೇಶ - ವಿದೇಶದ ಮಾರುಕಟ್ಟೆಗಳಲ್ಲಿ ಹೆಸರು ವಾಸಿಯಾಗಿರುವ ಟ್ರಿಲಿಯಂ ಫ್ಲೋಟೆಕ್ನಾಲಜೀಸ್ ಕಂಪನಿಯು ಪ್ರತಿಷ್ಠಿತ ಗ್ರಾಹಕರಾದ ರಿಲಯನ್ಸ್, ಅದಾನಿ, ಒಎನ್ಜಿಸಿ, ಎಚ್ಎಂಇಎಲ್, ಎನ್ಟಿಪಿಸಿ, ಜೆಎಸ್ಡಬ್ಲು, ಎಲ್ ಆಂಡ್ ಟಿ, ಜನರಲ್ ಎಲೆಕ್ಟ್ರಿಕ್, ದೂಸನ್, ಸೀಮೆನ್ಸ್, ಅಯಾನ್ ಎಕ್ಸ್ಚೇಂಜ್, ಅಂತಾರಾಷ್ಟ್ರೀಯ ಗ್ರಾಹಕರಾದ ಎಬಿಬಿ ಅಲ್ಟಮ್ ಹಿಟಾಚಿ ಮತ್ತು ಹನಿವೆಲ್ ಮತ್ತಿತರ ಕಂಪನಿಗಳಿಗೆ ಸೇವೆ ಒದಗಿಸುತ್ತಿದೆ. ಈ ಸ್ವಾಧೀನದ ಮೂಲಕ ತೈಲ ಮತ್ತು ಅನಿಲ, ವಿದ್ಯುತ್, ಲೋಹಗಳು ಮತ್ತು ಗಣಿಗಾರಿಕೆಯಂತಹ ವಿವಿಧ ವಲಯಗಳಿಗೆ ಸೇವೆ ಒದಗಿಸುವುದನ್ನು ಮುಂದುವರಿಸಲು ಐಎಂಸಿ ಸ್ವರ್ಣ ವೆಂಚರ್ಸ್ ಉದ್ದೇಶಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಐಎಂಸಿ ಸ್ವರ್ಣ ವೆಂಚರ್ಸ್ ಅಧ್ಯಕ್ಷ ಬಿಮಲ್ ಮೆಹ್ತಾ, ‘ವಾಲ್ವ್ ಉತ್ಪಾದನೆಯಲ್ಲಿ ಆದ್ಯ ಪ್ರವರ್ತಕ ಎನಿಸಿದ ಅಗ್ರಗಣ್ಯ ಸಂಸ್ಥೆ ಮತ್ತೆ ಭಾರತೀಯರ ಹಿಡಿತಕ್ಕೆ ಬಂದಿದೆ’ ಎಂದರು. ಐಎಂಸಿ ಸ್ವರ್ಣ ವೆಂಚರ್ಸ್ ಸಹ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ‘ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ಇದೆ. ಕಂಪನಿಯ ಹಿಂದಿನ ಖ್ಯಾತಿಯನ್ನು ಮರುಸ್ಥಾಪಿಸಲಿದ್ದೇವೆ’ ಎಂದರು. ಗ್ರಾಹಕರ ನಿರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸುತ್ತೇವೆ ಮತ್ತು ಮಾರಾಟವನ್ನು ಹಲವು ಪಟ್ಟು ಹೆಚ್ಚಿಸುತ್ತೇವೆ ಎಂದು ಐಎಂಸಿ ಸ್ವರ್ಣ ನಿರ್ದೇಶಕರಾದ ಶ್ಯಾಮ್ ಮೆಹ್ತಾ ಹಾಗೂ ಮೌನಿಕಾ ಕೋರೆ ತಿಳಿಸಿದರು.
ಐಎಂಸಿ ಗ್ರೂಪ್: ಐಎಂಸಿ ಉದ್ಯಮ ಸಮೂಹವು ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ 55 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಉಕ್ಕು ವಿತರಣೆ ಸಂಸ್ಥೆಯಾಗಿದೆ. ಕಂಪನಿಯು ಟಾಟಾ ಸ್ಟೀಲ್ ಮತ್ತು ಜೆಎಸ್ಡಬ್ಲ್ಯು ಸ್ಟೀಲ್ ಅನ್ನು ಪ್ರತಿನಿಧಿಸುತ್ತಿದೆ.