ಬಳ್ಳಾರಿ: ವಿಜಯನಗರ ಜಿಲ್ಲೆ ಅನುಷ್ಠಾನಗೊಂಡ ಮರುದಿನವೇ ಮೂಲ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಸಹಕಾರ ಕ್ಷೇತ್ರದಲ್ಲೂ ವಿಜಯ ಪತಾಕೆ ಹಾರಿಸಿದ್ದಾರೆ.
ರಾಜ್ಯದ 31ನೇ ಜಿಲ್ಲೆಯಾಗಿ 'ವಿಜಯನಗರ' ಘೋಷಣೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆನಂದ್ ಸಿಂಗ್ಗೆ ನಿನ್ನೆ (ಸೋಮವಾರ) ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರುವ ಮೂಲ ಸಂಭ್ರಮಾಚರಿಸಿದ್ದರು. ಇಂದು(ಮಂಗಳವಾರ) ಇದೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ (ಬಿಡಿಸಿಸಿ)ಬ್ಯಾಂಕ್ ಗಾದಿಯನ್ನೂ ಅಲಂಕರಿಸುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಹಿಡಿತ ಸಾಧಿಸಿದ್ದಾರೆ. ಇದನ್ನೂ ಓದಿರಿ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಅವರ ಪುತ್ರನಿಗೆ ಬೆದರಿಕೆ ಕರೆ!
ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಆನಂದ ಸಿಂಗ್ ಅವಿರೋಧ ಆಯ್ಕೆಯಾದರು. ಜ.2ರಂದು ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ.ಚಂದ್ರಶೇಖರಯ್ಯ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು.
ಹೊಸಪೇಟೆ ತಹಸೀಲ್ದಾರ್ ವಿಶ್ವನಾಥ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಚಿವ ಆನಂದ ಸಿಂಗ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ, ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ ಹಾಗೂ ಇತರರು ಹಾಜರಿದ್ದರು. ಹೊಸಪೇಟೆ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂದ (ಟಿಎಪಿಸಿಎಂಎಸ್) ಅಧ್ಯಕ್ಷರಾಗುವ ಮೂಲಕ ಆನಂದ ಸಿಂಗ್ ಸಹಕಾರ ಕ್ಷೇತ್ರ ಪ್ರವೇಶಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಯಲ್ಲೇ ಅಧ್ಯಕ್ಷ ಸ್ಥಾನವೂ ಒಲಿದಿದೆ.