ಜಿಲ್ಲೆ

ಬಿಡಿಎ: ಅರಣ್ಯ ಬಫರ್ ಸಮಸ್ಯೆಗೆ ಬೇಕಿದೆ ಕಾನೂನು ಬಲ

ಆರ್.ತುಳಸಿಕುಮಾರ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಚಿಸಿರುವ ಅಂಜನಾಪುರ ಬಡಾವಣೆ, ಬನಶಂಕರಿ 6ನೇ ಘಟ್ಟ, ನಾಡಪ್ರಭು ಕೆಂಪೇಗೌಡ ಲೇಔಟ್‌ಗಳಲ್ಲಿ ಅರಣ್ಯಕ್ಕೆ ಸೇರಿದ ಜಾಗದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳನ್ನು ವ್ಯಾಜ್ಯರಹಿತವಾಗಿಸಲು ಕಾನೂನು ಪರಿಧಿಯಲ್ಲಿ ಪರಾಮರ್ಶಿಸಿ ಪರಿಹಾರ ಒದಗಿಸುವಂತೆ ಸೈಟ್ ಹಂಚಿಕೆದಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅರಣ್ಯದ ಜಾಗ ಹಾಗೂ ಬರ್ ವಲಯದಲ್ಲೇ ಸೈಟ್ ಹಂಚಿಕೆ ಮಾಡಿರುವುದರಿಂದ ಅಲ್ಲಿ ನಾಗರಿಕರು ಸೂರು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ತಗಾದೆಯಿಂದ ದಶಕಗಳಿಂದ ಮನೆ ಕಟ್ಟಿಕೊಳ್ಳಲು ಒಪ್ಪಿಗೆ ನೀಡುವಂತೆ ಕೋರಿ ಸೈಟ್‌ದಾರರು ಪ್ರಾಧಿಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದಕ್ಕೆ ಸ್ಪಷ್ಟ ತೀರ್ಮಾನ ಕೈಗೊಳ್ಳದ ಕಾರಣ ಈಗ ತೂಗುಕತ್ತಿ ಎದುರಾದ ವೇಳೆ ಬಿಡಿಎ, ಪರಿಹಾರ ಕೋರಿ ಸರ್ಕಾರದ ಮೊರೆ ಹೋಗಿದೆ. ಇದನ್ನಾಧರಿಸಿ ಇತ್ತೀಚಿಗೆ ಡಿಸಿಎಂ ಹಾಗೂ ಅರಣ್ಯ ಇಲಾಖಾಧಿಕಾರಿಗಳು ಬರ್ ವಲಯ ಹಾಗೂ ಅರಣ್ಯವಲ್ಲದ ಪ್ರದೇಶದ ಮೇಲೆ ಹಕ್ಕು ಸಾಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಆದರೆ, ಇಲಾಖೆ ತನ್ನ ಜಮೀನನ್ನು ಸರ್ವೆ ಮಾಡದೆ ಮೌಖಿಕವಾಗಿ ಸೂಚನೆ ನೀಡುವುದರಿಂದ ಸಮಸ್ಯೆ ಇತ್ಯರ್ಥ ಕಾಣದು. ಇದಕ್ಕೆ ಕಾನೂನಿನ ಬಲ ಇಲ್ಲದಿದ್ದಲ್ಲಿ ಮತ್ತೊಂದು ದಿನ ಅರಣ್ಯ ಜಾಗವೆಂದು ಗುರುತಿಸಿದರೆ ಆಗ ಸೈಟ್‌ದಾರರ ಗತಿಯೇನು ಎಂಬ ಪ್ರಶ್ನೆ ಎದ್ದಿದೆ.

ಅರಣ್ಯ ಇಲಾಖೆ ನಿಯಮದನ್ವಯ ಒಂದು ಎಕರೆಯಲ್ಲಿ 50ಕ್ಕಿಂತ ಹೆಚ್ಚು ಮರಗಳಿಲ್ಲದ ಜಮೀನನ್ನು ಅರಣ್ಯ ಪ್ರದೇಶವೆಂದು ಪರಿಗಣಿಸುವುದಿಲ್ಲವೆಂದು ಸಮಜಾಯಿಷಿ ನೀಡಿದೆ. ಜತೆಗೆ ಹೆಚ್ಚು ಮರಗಳಿರುವ ಜಾಗವನ್ನು ಜನವಸತಿಗೆ ಬಿಟ್ಟುಕೊಡುವ ಬಗ್ಗೆ ಪೂರ್ಣವಾಗಿ ತೀರ್ಮಾನ ತಿಳಿಸಿಲ್ಲ. ಈ ಎರಡೂ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲದಿದ್ದಾಗ ಬಿಡಿಎ ಮತ್ತೆ ಜನರನ್ನು ಕತ್ತಲಲ್ಲಿಡುವ ಯತ್ನ ಮಾಡುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಏಕೆಂದರೆ ಪ್ರಾಧಿಕಾರ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳದೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತನ್ನ ಹೊಣೆಯನ್ನು ಸರ್ಕಾರಕ್ಕೆ ವರ್ಗಾಯಿಸಿದೆ. ಸಮಸ್ಯೆ ಏನೇ ಇದ್ದರೂ ಸರ್ಕಾರಿ ಸಂಸ್ಥೆಯಾಗಿರುವ ಬಿಡಿಎಯಿಂದ ಅರಣ್ಯ ಜಾಗದಲ್ಲಿ ಹಂಚಿಕೆ ಮಾಡಿರುವ ಸೈಟ್‌ಗಳ ಬಗ್ಗೆ ನಿಖರವಾಗಿ ಜನರಿಗೆ ತಿಳಿಸಬೇಕು ಎಂಬುದಾಗಿ ಎನ್‌ಪಿಕೆಎಲ್ ಮುಕ್ತ ವೇದಿಕೆಯ ಅಧ್ಯಕ್ಷ ಶ್ರೀಧರ್ ನುಗ್ಗೇಹಳ್ಳಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

2,000 ಮಂದಿಯ ಬುದುಕಿನ ಪ್ರಶ್ನೆ:

ಬನಶಂಕರಿ 6ನೇ ಘಟ್ಟ, ನಾಡಪ್ರಭು ಕೆಂಪೇಗೌಡ ಲೇಔಟ್ ಸಹಿತ ವಿವಿಧ ಬಡಾವಣೆಗಳಲ್ಲಿ 2,000ಕ್ಕಿಂತ ಹೆಚ್ಚು ಸೈಟ್‌ಗಳನ್ನು ಅರಣ್ಯ ಭೂಮಿ ಹಾಗೂ ಬರ್ ವಲಯದಲ್ಲಿ ಹಂಚಿಕೆ ಮಾಡಿದೆ. ಇಲ್ಲೆಲ್ಲ ಸೈಟ್ ಖರೀದಿಸಿರುವ ಸಾರ್ವಜನಿಕರು ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಎನ್‌ಒಸಿ ನೀಡುತ್ತಿಲ್ಲ. ಈ ಬಗ್ಗೆ ಬಿಡಿಎಗೆ ಮೊರೆ ಹೋದರೂ ಸಬೂಬು ನೀಡಿ ಸಾಗಹಾಕಲಾಗುತ್ತಿದೆ. ಇದರಿಂದ ಬ್ಯಾಂಕ್ ಸಾಲ ಮಾಡಿ ನಿವೇಶನ ಖರೀದಿಸಿರುವ ಜನರು ಇತ್ತ ಮನೆ ನಿರ್ಮಿಸಿಕೊಳ್ಳಲಾಗದೆ, ಅತ್ತ ಸಾಲ ತೀರಿಸಿಕೊಳ್ಳಲಾಗದೆ ಅತಂತ್ರರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಂಚಿಕೆ ಮಾಡಿರುವ ಕೆಂಪೇಗೌಡ ಲೇಔಟ್‌ನ ಬ್ಲಾಕ್ 7, 8ರ ಎ, ಡಿ ಹಾಗೂ ಇ ಸೆಕ್ಟರ್‌ನಲ್ಲೂ ಪ್ರಾಧಿಕಾರ ಎಡವಟ್ಟು ಸೃಷ್ಟಿಸಿದೆ. ಜತೆಗೆ ಹರಾಜು ಹಾಕಲಾಗಿರುವ ಮೂಲೆ ನಿವೇಶನ, ಸಿಎ ನಿವೇಶನಗಳೂ ವ್ಯಾಜ್ಯದಿಂದ ಮುಕ್ತವಾಗಿಲ್ಲ. ಸುಮಾರು 2 ಸಾವಿರ ಮಂದಿ ಸಮಸ್ಯೆಯಿಂದ ಬಸವಳಿದಿದ್ದರೂ ಪ್ರಾಧಿಕಾರ ಗಂಭೀರವಾಗಿ ವರ್ತಿಸುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಅಧಿಕಾರಿಗಳ ತಪ್ಪಿಗೆ ಜನರಿಗೆ ಬರೆ !:

ಬಿಡಿಎ ಅಧಿಕಾರಿಗಳು ಸೈಟ್ ಹಂಚಿಕೆ ಮಾಡುವ ಭರದಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸದ ಕಾರಣ ಹಲವು ಎಡವಟ್ಟುಗಳ ಸೃಷ್ಟಿಗೆ ಕಾರಣವಾಗಿದ್ದಾರೆ. ಭೂಸ್ವಾಧೀನವಾಗದ, ಅನ್ಯ ಯೋಜನೆಗಳಿಗೆ ಸೇರಿದ ಹಾಗೂ ಖಾಸಗಿ ಸ್ವತ್ತನ್ನು ಅಧಿಸೂಚಿಸಿ ಸ್ವಾಧೀನ ಮಾಡಿಕೊಳ್ಳದೆ ರಸ್ತೆ, ಸೈಟ್‌ಗಳನ್ನು ನಿರ್ಮಿಸಲಾಗಿದೆ. ಈ ಕಾರ್ಯಕ್ಕೆ ದೊಡ್ಡ ಮೊತ್ತದ ವೆಚ್ಚ ಮಾಡಲಾಗಿದೆ. ದಾಖಲಾತಿಯನ್ನು ತಾಳೆ ಹಾಕದಿರುವುದು ಹಾಗೂ ಸ್ಥಳ ಪರಿಶೀಲನೆ ಮಾಡದಿರುವುದು ಅವಾಂತರ ಸೃಷ್ಟಿಗೆ ಕಾರಣವಾಗಿದೆ. ಈ ಅಂಶವು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ಬಂದಿದ್ದರೂ ಏನೂ ಕ್ರಮ ತೆಗೆದುಕೊಳ್ಳದಿರುವುದು ತಪ್ಪುಗಳು ಪುನರಾವರ್ತನೆಯಾಗುತ್ತಿದೆ. ಜತೆಗೆ ಆಯಾಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಸೀಮಿತ ಅವಧಿಗೆ ಮಾತ್ರ ಪ್ರಾಧಿಕಾರಕ್ಕೆ ನಿಯೋಜನೆ ಆಗುತ್ತಿರುವುದು ಇಂತಹ ಸಮಸ್ಯೆ ಮರುಕಳಿಸುತ್ತಿದೆ ಎಂಬುದಾಗಿ ಈ ಹಿಂದೆ ಸರ್ಕಾರ ನೇಮಿಸಿದ್ದ ಎಚ್.ಶಶಿಧರ್ ಸಮಿತಿ ಬೊಟ್ಟು ಮಾಡಿತ್ತು. ಆನಂತರವೂ ಪ್ರಾಧಿಕಾರ ಎಚ್ಚೆತ್ತುಕೊಳ್ಳದ ಕಾರಣ ನಾಗರಿಕರು ಅನಗತ್ಯವಾಗಿ ಸಮಸ್ಯೆಗೆ ಸಿಲುಕುವಂತಾಗಿದೆ.

ರಜೆ ದಿನವೂ ಅಧಿಕಾರಿಗಳಿಂದ ಕೆಲಸ:

ಬಿಡಿಎನಲ್ಲಿ ಸೈಟ್ ರಚನೆ ಹಾಗೂ ಹಂಚಿಕೆ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ಕೆಲ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೈಗೊಂಡಿದ್ದ ಪರಿಣಾಮ ಪ್ರಾಧಿಕಾರಕ್ಕೆ ಕೋಟ್ಯಂತರ ರೂ. ನಷ್ಟ ಆಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸೈಟ್ ಹರಾಜು ಪ್ರಕ್ರಿಯೆಯಲ್ಲಿ ಕೆಲ ಲೋಪಗಳು ನುಸುಳಿರುವುದನ್ನು ಮಾಹಿತಿ ಸಂಗ್ರಹಿಸಿರುವ ನೂತನ ಆಯುಕ್ತ ಎನ್.ಜಯರಾಮ್ ಅವರು ಎಲ್ಲ ಬಡಾವಣೆಗಳಲ್ಲಿ ಹಾಲಿ ಲಭ್ಯವಿರುವ ನಿವೇಶನಗಳ ಮಾಹಿತಿ ಕೋರಿದ್ದಾರೆ. ಈ ಕೆಲಸವನ್ನು ರಜಾದಿನದಂದು ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದರು. ಇದರ‌್ವನಯ ಕಳೆದ ಭಾನುವಾರ (ಅ.8) ಹಾಗೂ ಎರಡನೇ ಶನಿವಾರ (ಅ.14) ಕಾರ್ಯದರ್ಶಿ, ಉಪ ಕಾರ್ಯದರ್ಶಿ-1ರಿಂದ 4ರ ವಿಭಾಗ ಹಾಗೂ ಕಂದಾಯ ವಿಭಾಗದ ಕಚೇರಿಗಳಲ್ಲಿ ಅಧಿಕಾರಿ-ಸಿಬ್ಬಂದಿಗಳು ಕಾರ್ಯನಿರ್ವಹಿಸಿ ಸೈಟ್‌ಗಳ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ವರದಿಯನ್ನು ಸೋಮವಾರ ಅಥವಾ ಮಂಗಳವಾರ ಆಯುಕ್ತರಿಗೆ ಸಲ್ಲಿಸುವ ಸಾಧ್ಯತೆ ಇದೆ.

ಪ್ರಾಧಿಕಾರ ಅಂಜನಾಪುರ ಬಡಾವಣೆ ಸಹಿತ ವಿವಿಧ ಲೇಔಟ್‌ಗಳನ್ನು ನಿರ್ಮಿಸಿ ಸೈಟ್‌ಗಳನ್ನು ಹಂಚಿಕೆ ಮಾಡುವ ವೇಳೆ ಅರಣ್ಯ ಇಲಾಖೆ ಯಾವುದೇ ತಗಾದೆ ಎತ್ತಿಲ್ಲ. ಈಗ ಆ ಜಾಗ ನಮ್ಮದೆಂದು ಹಕ್ಕು ಸಾಧಿಸುತ್ತಿರುವುದರಿಂದ ನಮಗೂ ಇಕ್ಕಟ್ಟಿನ ಸ್ಥಿತಿ ಉದ್ಭವಿಸಿದೆ. ಈ ವಿಚಾರವನ್ನು ಡಿಸಿಎಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು.

- ಡಾ. ಎಚ್.ಆರ್.ಶಾಂತಾರಾಜಣ್ಣ, ಬಿಡಿಎ ಅಭಿಯಂತರ ಸದಸ್ಯ

ಅರಣ್ಯ ಸೇರಿದಂತೆ ವಿವಿಧ ಬರ್ ವಲಯದಲ್ಲಿ ಸೈಟ್ ಹಂಚಿಕೆ ಮಾಡುವಂತಿಲ್ಲ. ಈ ಮಾಹಿತಿ ಗೊತ್ತಿದ್ದರೂ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರನ್ನು ಕತ್ತಲಲ್ಲಿಟ್ಟು ಹಂಚಿಕೆ ಪ್ರಕ್ರಿಯೆ ಕೈಗೊಂಡಿದ್ದಾರೆ. ಈ ತಪ್ಪು ಸರಿಪಡಿಸಲು ಆರಣ್ಯ ಇಲಾಖೆಯ ಮೊರೆ ಹೋಗಿದ್ದರೂ, ಪರಿಹಾರವನ್ನು ಕಾನೂನು ವ್ಯಾಪ್ತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತೆ ಸೈಟ್‌ದಾರರು ಬಿಡಿಎ ಕಚೇರಿಗೆ ವೃಥಾ ಅಲೆದಾಟ ನಡೆಸಬೇಕಾಗುತ್ತದೆ.

- ಸೂರ್ಯಕಿರಣ್, ಎನ್‌ಪಿಕೆಎಲ್ ಮುಕ್ತ ವೇದಿಕೆಯ ಪದಾಧಿಕಾರಿ