ಜಿಲ್ಲೆ

ರೆವಿನ್ಯೂ ಸೈಟ್‌ದಾರರಿಗೆ ಅರ್ಜಿ ಸಲ್ಲಿಸಲು ಬಿಡಿಎ ಅವಕಾಶ

ಬೆಂಗಳೂರು: ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆ ಮುನ್ನ ರೆವಿನ್ಯೂ ನಿವೇಶನದಾರರಿಗೆ ಪರಿಹಾರದ ಸೈಟ್ ಒದಗಿಸುವ ಸಂಬಂಧ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ಬಿಡಿಎ ನೀಡಿದೆ.

ಬಡಾವಣೆ ರಚನೆಗಾಗಿ ಅಂತಿಮ ಅಧಿಸೂಚನೆ ಹೊರಡಿಸಿದ ವೇಳೆ ಕಂದಾಯ ಸೈಟ್‌ಗಳಿಗೆ ಪರಿಹಾರ ನೀಡುವುದಿಲ್ಲ ಎಂದು ಪ್ರಾಧಿಕಾರ ಹೇಳಿತ್ತು. ಇದು ದೊಡ್ಡ ಸಂಖ್ಯೆಯಲ್ಲಿದ್ದ ಸಾರ್ವಜನಿಕರಿಗೆ ಆಘಾತ ನೀಡಿದ್ದು, ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಸರ್ಕಾರ ಹಾಗೂ ನ್ಯಾಯಾಲಯದ ಮೊರೆ ಹೋದ ಬಳಿಕ ಪರಿಹಾರ ಒದಗಿಸುವ ಅಭಯ ನೀಡಲಾಗಿತ್ತು. ಆನಂತರವೇ ಲೇಔಟ್ ರಚನೆಗೆ ಪ್ರಾಧಿಕಾರ ಮುಂದಾಗಿತ್ತು.

2022ರ ಆ.6ಕ್ಕೂ ಮುನ್ನ ಲೇಔಟ್ ವ್ಯಾಪ್ತಿಯ ಜಮೀನಿನಲ್ಲಿ ರೆವಿನ್ಯೂ ನಿವೇಶನಗಳನ್ನು ಖರೀದಿಸಿರುವ ರೆವಿನ್ಯೂ ನಿವೇಶನದಾರರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಇದರನ್ವಯ ಈ ಸೌಲಭ್ಯ ಪಡೆದುಕೊಳ್ಳಲು ಈಗಾಗಲೇ ನಾಲ್ಕು ಬಾರಿ ಸಮಯ ನೀಡಲಾಗಿತ್ತು. ಈಗ ಮೊತ್ತೊಂದು ಬಾರಿ ಸಮಯಾವಕಾಶ ನೀಡಿದ್ದು, ಸೆ.6ರವರೆಗೆ ಸಂತ್ರಸ್ತರು ತಮ್ಮ ಸೈಟ್ ಸಂಬಂಧಿತ ದಾಖಲೆಗಳೊಂದಿಗೆ ಬಿಡಿಎ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಭೂಸ್ವಾಧೀನ ವಿಭಾಗದ ಉಪ ಆಯುಕ್ತರು ತಿಳಿಸಿದ್ದಾರೆ.