ಬೆಂಗಳೂರು: ಯಲಹಂಕದ ಜೆ.ಬಿ.ಕಾವಲ್‌ನ ಖಾಸಗಿ ಲೇಔಟ್‌ನಲ್ಲಿ ಕಟ್ಟಡಗಳನ್ನು ತೆರವುಗೊಳಿಸಿರುವುದಕ್ಕೆ ಬಿಡಿಎ ಸಮರ್ಥಿಸಿಕೊಂಡಿದ್ದು, ಅನಧಿಕೃತ ಬಡಾವಣೆಗಳಲ್ಲಿ ಸೈಟ್ ಖರೀದಿಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಶುಕ್ರವಾರ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ಬಿಡಿಎ ಏಕಾಏಕಿ ಮನೆ, ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿತ್ತು. ದಿಢೀರ್ ಆಗಿ ಕೈಗೊಂಡಿದ್ದ ಈ ಕಾರ್ಯಾಚರಣೆಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಮನೆಗಳನ್ನು ತಾನು ಒಡೆದುಹಾಕಿಲ್ಲ ಎಂದು ಬಿಡಿಎ ಆಯುಕ್ತರು, ಇಂಜಿನಿಯರ್‌ಗಳು ಪ್ರತಿಕ್ರಿಯಿಸಿದ್ದರು. ಆದರೆ, ಮರುದಿನವೇ ಪತ್ರಿಕಾ ಪ್ರಕಟಣೆ ಹೊರಡಿಸಿ ಖಾಸಗಿ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಬಡಾವಣೆ ನಕ್ಷೆಯ ಅನುಮೋದನೆ ಇಲ್ಲದೆ ಲೇಔಟ್ ರಚಿಸಿ, ನಿವೇಶನವನ್ನು ಹಂಚಿಕೆ ಮಾಡಬೇಕು. ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆಯದೇ ಬಡಾವಣೆಯನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಅದು ಕಾನೂನಿಗೆ ವಿರುದ್ಧ ಎಂದು ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಆಯುಕ್ತರ ಆದೇಶದಂತೆ ಜೆ.ಬಿ. ಕಾವಲ್ ಗ್ರಾಮದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆಯ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಅನಧಿಕೃತ ಬಡಾವಣೆಯನ್ನು ನಿರ್ಮಿಸುವುದು. ನಿವೇಶನಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ಬಿಡಿಎ ಇಲ್ಲಿನ ಅನ್ನಪೂಣೇಶ್ವರಿ ಲೇಔಟ್‌ನಲ್ಲಿ ಮನೆ ನಿರ್ಮಿಸುತ್ತಿದ್ದ ಕೆಲವರಿಗೆ ನೋಟಿಸ್ ನೀಡಲಾಗಿತ್ತು. ಕಾರಂತ ಬಡಾವಣೆಗೆ ಸೇರಿರುವ ವ್ಯಾಪ್ತಿಯಲ್ಲಿರುವ ಕಾರಣ ಕಟ್ಟಡ ನಿರ್ಮಿಸುವಂತಿಲ್ಲ ಎಂದು ತಾಕೀತು ಮಾಡಿತ್ತು. ಆದರೆ, ಈ ಖಾಸಗಿ ಲೇಔಟ್ ಡಿಸಿ ಪರಿವರ್ತನೆ ಹಾಗೂ ಸ್ಥಳೀಯ ಗ್ರಾಪಂ ಪ್ರಮಾಣಪತ್ರ ಪಡೆದಿತ್ತು. ಆದರೆ, ಪ್ರಾಧಿಕಾರದ ಅನುಮೋದನೆ ಪಡೆಯದ ಕಾರಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.