ಜಿಲ್ಲೆ

ಮಹಾಯೋಜನೆ ಸಿದ್ಧಪಡಿಸಲು ಗ್ಲೋಬಲ್ ಟೆಂಡರ್ ಆಹ್ವಾನಿಸಿದ ಬಿಡಿಎ

ಬೆಂಗಳೂರು: ರಾಜಧಾನಿಯ ಸಮಗ್ರ ಅಭಿವೃದ್ಧಿಯ ಮುನ್ನೋಟದ ಪೀಠಿಕೆಯಾದ ಸಮಗ್ರ ಅಭಿವೃದ್ಧಿ ಮಹಾಯೋಜನೆ (ಸಿಡಿಪಿ) ತಯಾರಿಸಲು ಅರ್ಹ ಸಂಸ್ಥೆಯಿಂದ ಸೇವೆ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಾಗತಿಕ ಟೆಂಡರ್ ಆಹ್ವಾನಿಸಿದೆ.

ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶದ ಪರಿಷ್ಕೃತ ಮಹಾಯೋಜನೆ - 2041ರ ತಯಾರಿಸಲು ರಾಜ್ಯ ಸರ್ಕಾರ ಬಿಡಿಎಗೆ ಸೂಚಿಸಿದೆ. ಇದರ ಸಂಬಂಧಿತ ಪೂರ್ವಭಾವಿ ಕಾರ್ಯವನ್ನು ಪ್ರಾಧಿಕಾರವು ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೇ ಸಿಡಿಪಿಯನ್ನು ಪೂರ್ಣ ಪ್ರಮಾಣದಲ್ಲಿ ಸಿದ್ಧಪಡಿಸಲು ಖಾಸಗಿಯವರಿಂದ ಸೇವೆ ಪಡೆಯಲು ನಿರ್ಧರಿಸಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ‘ಸಿಡಿಪಿ - 2015’ರ ಅವಧಿ ಮುಗಿದಿದೆ. ಹೊಸ ಸಿಡಿಪಿ ಜಾರಿ ಆಗುವವರೆಗೂ ಹಿಂದಿನ ಮಹಾಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಸಿಡಿಪಿ-2031ಅನ್ನು ಸಿದ್ಧಪಡಿಸಲು 2017ರಲ್ಲೇ ಆದೇಶ ಹೊರಬಿದ್ದು, ಬಿಡಿಎ ತನ್ನ ಕೆಲಸವನ್ನು ಆರಂಭಿಸಿತ್ತು. ಆದರೆ, ವಿವಿಧ ಅಂಶಗಳನ್ನು ಆಖೈರುಗೊಳಿಸಲು ಸಾಧ್ಯವಾಗಿಲ್ಲ. ಈ ವಿಳಂಬದಿಂದಾಗಿ 2031ರ ವೇಳೆಗೆ ಅನ್ವಯವಾಗುವ ಸಿಡಿಪಿಅನ್ನು ಈಗ ಒಪ್ಪಿಕೊಂಡಲ್ಲಿ, ಮುಂದಿನ ಐದು ವರ್ಷಕ್ಕೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸಿಡಿಪಿ ಹತ್ತು ವರ್ಷದ ಅವಧಿ ಇರುವುದರಿಂದ 2041ರವರೆಗೂ ಅನ್ವಯಿಸುವ ರೀತಿ ಪರಿಷ್ಕೃತ ರೂಪದಲ್ಲಿ ಸಿದ್ಧಪಡಿಸಲು ಸರ್ಕಾರ ತೀರ್ಮಾನಿಸಿದೆ.

2026ರ ಅಂತ್ಯದೊಳಗೆ ಜಾರಿ?:

ಪರಿಷ್ಕೃತ 2041 ಸಿಡಿಪಿಗೆ ಸ್ಪಷ್ಟ ರೂಪ ನೀಡಲು ಖಾಸಗಿ ಸಂಸ್ಥೆಯ ಸಹಕಾರ ಪಡೆಯಲಾಗುತ್ತದೆ. ಟೆಂಡರ್‌ಗೆ ಬಿಡ್ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಆ ಬಳಿಕ 2 ತಿಂಗಳೊಳಗೆ ಅರ್ಹ ಸಂಸ್ಥೆಗೆ ಕಾರ್ಯಾದೇಶ ನೀಡಿ ಸಿಡಿಪಿ ಸಿದ್ಧಪಡಿಸುವ ಕಾರ್ಯ ಆರಂಭಿಸಲಾಗುತ್ತದೆ. ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಕರಡು ರೂಪದ ಸಿಡಿಪಿ ಸಿದ್ಧಪಡಿಸಿ ಸರ್ಕಾರದ ಒಪ್ಪಿಗೆಯೊಂದಿಗೆ ಸಾರ್ವಜನಿಕ ಆಕ್ಷೇಪಣೆ ಕೋರಲಾಗುತ್ತದೆ. ಆನಂತರ ಸಲಹೆ-ಸೂಚನೆ ಆಧರಿಸಿ ಅಂತಿಮ ಸಿಡಿಪಿ ಜಾರಿಗೊಳಿಸಲಾಗುವುದು. ಈ ಪ್ರಕ್ರಿಯೆ 2026ರ ಅಂತ್ಯದೊಳಗೆ ನಡೆಸಲು ಗುರಿ ಹೊಂದಲಾಗಿದೆ ಎಂದು ಬಿಡಿಎ ನಗರ ಯೋಜನಾ ಸದಸ್ಯ ಶಶಿಕುಮಾರ್ ತಿಳಿಸಿದ್ದಾರೆ.

ಹೊಸ ಯೋಜನೆಗಳ ಸೇರ್ಪಡೆ:

ಭವಿಷ್ಯದಲ್ಲಿ ಬೆಂಗಳೂರಿನ ಜನಸಂಖ್ಯೆ ಹಾಗೂ ನಗರ ಮೂಲಸೌಕರ್ಯಕ್ಕೆ ಅಗತ್ಯವಾಗುವುದನ್ನು ಊಹಿಸಿ ಸಿಡಿಪಿಗೆ ಸೇರಿಸಲಾಗುತ್ತದೆ. ಹಾಗಾಗಿ ಪರಿಷ್ಕೃತ ಸಿಡಿಪಿ - 2041ರಲ್ಲಿ ನಗರದಲ್ಲಿ ಹೊಸದಾಗಿ ಕೈಗೆತ್ತಿಕೊಳ್ಳಲಿರುವ ಬೃಹತ್ ಯೋಜನೆಗಳನ್ನು ಅಡಕಗೊಳಿಸಲಾಗುತ್ತದೆ. ದೊಡ್ಡ ಪ್ರಾಜೆಕ್ಟ್‌ಗಳು ಜಾರಿಯಾಗಲು ಸಿಡಿಪಿ ಬಲ ಬೇಕು. ಇದರಿಂದ ಆಯಾ ಯೋಜನೆಗಳ ವಿವರವಾದ ಮಾಹಿತಿ ಸಹಿತ ಅನುಷ್ಠಾನಕ್ಕೆ ಸ್ಪಷ್ಟ ಚೌಕಟ್ಟು ನೀಡಬಹುದು. ಇದನ್ನಾಧರಿಸಿ ಉದ್ದೇಶಿತ ಟನಲ್ ರಸ್ತೆ, ಬೆಂಗಳೂರು ಬಿಜಿನೆಸ್ ಕಾರಿಡಾರ್ (ಪಿಆರ್‌ಆರ್) ಎಲಿವೇಟೆಡ್ ರಸ್ತೆಗಳು, ಅಂಡರ್‌ಪಾಸ್, ಮೇಲ್ಸೇತುವೆ, ರಸ್ತೆ ವಿಸ್ತರಣೆ ಪ್ರಾಜೆಕ್ಟ್‌ಗಳು ಸೇರ್ಪಡೆ ಆಗಲಿವೆ. ಇವುಗಳ ಜತೆಗೆ ಮೆಟ್ರೋ ವಿಸ್ತರಿತ ಭಾಗ, ಸಬರ್ಬನ್ ರೈಲು ಯೋಜನೆ, ವರ್ತುಲ ರೈಲ್ವೆ ಯೋಜನೆ, ಬಿಡಿಎ ರಚಿಸಲಿರುವ ಬಡಾವಣೆಗಳು, ಹೊಸ ಉಪನಗರ ನಿರ್ಮಾಣ, ಐಟಿ ಹಾಗೂ ಕೈಗಾರಿಕಾ ಹಬ್‌ಗೂ ಸ್ಥಾನ ಸಿಗಲಿದೆ.