ಜಿಲ್ಲೆ

ಡಿ.14ರಂದು ಕಣಿಕೆಮಿಣಿಕೆಯಲ್ಲಿ ಬಿಡಿಎ ಫ್ಲ್ಯಾಟ್ ಮೇಳ

ಆರ್.ತುಳಸಿಕುಮಾರ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ವಸತಿ ಸಮುಚ್ಚಯಗಳಲ್ಲಿನ ಘಟಕಗಳನ್ನು ಮಾರಾಟ ಮಾಡಲು ಕಣಿಮಿಣಿಕೆ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ (ಡಿ.14) ಫ್ಲ್ಯಾಟ್ ಮೇಳವನ್ನು ಆಯೋಜಿಸಿದೆ.

ಮೈಸೂರು ರಸ್ತೆ ಬಳಿಯಿರುವ ಕಣಿಮಿಣಿಕೆಯಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೇಳ ನಡೆಯಲಿದೆ. ಮೇಳದಲ್ಲಿ ಕಣಿಮಿಣಿಕೆ, ತಿಪ್ಪಸಂದ್ರ, ಕೋನದಾಸಪುರ ಹಾಗೂ ಇತರ ಸ್ಥಳಗಳಲ್ಲಿ ನಿರ್ಮಿಸಿರುವ ವಸತಿ ಸಮುಚ್ಛಯಗಳಲ್ಲಿನ 1ಬಿಎಚ್‌ಕೆ, 2ಬಿಎಚ್‌ಕೆ ಹಾಗೂ 3ಬಿಎಚ್‌ಕೆ ಮಾದರಿಯ ಫ್ಲ್ಯಾಟ್‌ಗಳನ್ನು ಖರೀದಿಸಬಹುದಾಗಿದೆ.

ಮೊದಲು ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಮಹಡಿವಾರು ಫ್ಲ್ಯಾಟ್ ಮೊತ್ತದಲ್ಲಿ ಶೇ. 0.05 ದರ ಹೆಚ್ಚಳವಿರುತ್ತದೆ. ಹಾಗಾಗಿ ಘಟಕದ ಒಟ್ಟು ಮೊತ್ತದಲ್ಲಿ ಪ್ರಾಥಮಿಕ ಠೇವಣಿ ಹಣವನ್ನು ಡಿಮಾಂಡ್ ಡ್ರ್‌ಟಾ (ಡಿಡಿ) ಅಥವಾ ಆನ್‌ಲೈನ್ ಮೂಲಕ ಪಾವತಿಸಿದರೆ ಸ್ಥಳದಲ್ಲೇ ತಾತ್ಕಾಲಿಕ ಹಂಚಿಕೆ ಪತ್ರವನ್ನು ವಿತರಿಸಲಾಗುತ್ತದೆ. ಆನಂತರ ಗಡುವಿನೊಳಗೆ ಪೂರ್ಣ ಮೊತ್ತ ಪಾವತಿಸಿದ್ದಲ್ಲಿ ಖರೀದಿಸುವವರ ಹೆಸರಿಗೆ ಫ್ಲ್ಯಾಟ್ ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.