ಜಿಲ್ಲೆ

ಪಿಆರ್‌ಆರ್ ರಸ್ತೆ ಯೋಜನೆ ಜಾರಿಗೆ ಬಿಡಿಎ ಅಧ್ಯಕ್ಷ ಸೂಚನೆ

ಆರ್.ತುಳಸಿಕುಮಾರ್

ಬೆಂಗಳೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಪೆರಿಪೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಜಾರಿಗೊಳಿಸುವುದಾಗಿ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಭುಸ್ವಾಧೀನ ಮಾಡಿಕೊಳ್ಳಲಿರುವ ಜಮೀನು ಮಾಲೀಕರಿಗೆ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಯೋಜನೆ ಜಾರಿಯನ್ನು ವಹಿಸಿಕೊಳ್ಳುವ ಕಂಪನಿಯೇ ಭೂಸ್ವಾಧೀನ ಮೊತ್ತ ಹಾಗೂ ಕಾಮಗಾರಿಯ ವೆಚ್ಚವನ್ನು ಭರಿಸುವ ರೀತಿ ಟೆಂಡರ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ. ಈ ಹಿಂದೆಯೂ ಕೂಡ ಇದೇ ರೀತಿಯ ಮಾನದಂಡ ಹೊಂದಿದ್ದ ಟೆಂಡರ್‌ಅನ್ನು 3 ಬಾರಿ ಆಹ್ವಾನಿಸಿದ್ದರೂ, ಯಾವ ಗುತ್ತಿಗೆ ಕಂಪನಿಗಳು ಯೋಜನೆ ಜಾರಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ಭೂಸ್ವಾಧೀನ ವೆಚ್ಚ ಹೊರೆ ಆಗಲಿದೆ ಎಂಬ ಕಾರಣಕ್ಕೆ ಆ ಎಲ್ಲ ಕಂಪನಿಗಳು ಯೋಜನೆಯಿಂದ ಹಿಂದೆ ಸರಿದಿದ್ದವು.

ಕೆಲ ತಿಂಗಳ ಹಿಂದೆ ಡಿಸಿಎಂ ಮಧ್ಯಪ್ರವೇಶದಿಂದ ಯೋಜನೆ ಜಾರಿ ಎಂಎನ್‌ಸಿ ಕಂಪನಿಯೊಂದು ಮುಂದೆ ಬಂದಿತ್ತು. ಆದರೆ, ಹಣಕಾಸು ಒದಗಿಸಲು ಸಾಲಕ್ಕೆ ಖಾತರಿ ದೊರೆಯದಿರುವುದು ಹಾಗೂ ಬಿಡ್‌ನಲ್ಲಿನ ಕೆಲ ಅಂಶಗಳನ್ನು ಪೂರೈಸಲು ವಿಲವಾದ ಕಾರಣ ಟೆಂಡರ್‌ನಿಂದ ಹೊರಗುಳಿಯಿತು. ಆ ಬಳಿಕ ರಾಜ್ಯ ಸರ್ಕಾರ ಹೊಸ ರೂಪದಲ್ಲಿ ಯೋಜನೆಗೆ ಮರುಚಾಲನೆ ನೀಡಲು ಕೆಲ ಅಂಶಗಳನ್ನು ಮಾರ್ಪಡಿಸಿ ಭೂಮಾಲೀಕರಿಗೆ ಪರಿಹಾರ ಒದಗಿಸುವ ಭರವಸೆ ನೀಡಿತ್ತು. ಇದೀಗ ಬಿಡಿಎ ಅಧ್ಯಕ್ಷರ ನೇತೃತ್ವದಲ್ಲಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆ ಟೇಕ್ ಆಫ್ ಆಗಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿರುವುದು ಕಾಮಗಾರಿ ಆರಂಭಿಸುವ ಕುರುಹು ಕಾಣಿಸುತ್ತಿದೆ.