ಜಿಲ್ಲೆ

ಬಿಡಿಎ ಸಿಎ ನಿವೇಶನಗಳ ಬಾಕಿ 200 ಕೋಟಿ ರೂ.

lakshmihegde


ಬೆಂಗಳೂರು: ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ, ಆರೋಗ್ಯ ಹಾಗೂ ಇತರ ಸಾರ್ವಜನಿಕ ಸೇವೆ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದಿರುವ ನಾಗರಿಕ ಸೌಲಭ್ಯ ನಿವೇಶನಗಳ (ಸಿಎ) ನೂರಾರು ಕೋಟಿ ರೂಪಾಯಿಯನ್ನು ಹಲವು ಸಂಸ್ಥೆಗಳು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ.

ಮತ್ತೊಮ್ಮೆ ನವೀಕರಣ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳ ಗುತ್ತಿಗೆ ಅವಧಿ ಅಂತ್ಯಗೊಂಡಿದ್ದರೂ ಬಿಡಿಎ ಮತ್ತೆ ನವೀಕರಣ ಮಾಡಿದೆ. ತೋರಿಕೆಗೆ ಮಾತ್ರ ನೋಟಿಸ್ ಜಾರಿ ಮಾಡಿ ಸುಮ್ಮನಾಗಿದೆ. ಬಾಕಿ ಹಣ ವಸೂಲಿ ಮಾಡಲು ಯಾವುದೇ ಕಟ್ಟುನಿಟ್ಟಿನ ಕ್ರಮ ಜರುಗಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 34 ಸಿಎ ನಿವೇಶನಗಳ ಗುತ್ತಿಗೆ ಹಣವನ್ನು ಒಪ್ಪಂದದಂತೆ ಸಂಸ್ಥೆಗಳು ಪಾವತಿ ಮಾಡಿಲ್ಲ. ಇದರಿಂದ ಬಿಡಿಎ ಬೊಕ್ಕಸಕ್ಕೆ 200 ಕೋಟಿ ರೂ. ನಷ್ಟವಾಗಿದೆ. ಮೆಡಿಕಲ್ ಕಾಲೇಜು, ಶಾಲೆ- ಕಾಲೇಜು, ಹಾಸ್ಟೆಲ್, ಸಾಂಸ್ಕೃತಿಕ ಕೇಂದ್ರ ಸೇರಿ ವಿವಿಧ ಚುಟುವಟಿಕೆಗಳಿಗೆ ನಿವೇಶನ ಗುತ್ತಿಗೆ ಪಡೆಯಲಾಗಿದೆ. ಒಪ್ಪಂದ ಮಾಡಿಕೊಂಡಂತೆ ಗುತ್ತಿಗೆ ಹಣವನ್ನು ಸಂಸ್ಥೆಗಳು ಪಾವತಿಸಿಲ್ಲ. ಬಾಕಿ ಉಳಿಸಿ ಕೊಂಡಿರುವ ಸಂಸ್ಥೆಗಳಿಗೆ ಗುತ್ತಿಗೆ ಹಣ ಪಾವತಿ ಮಾಡುವಂತೆ ಬಿಡಿಎ ನೋಟಿಸ್ ಜಾರಿ ಮಾಡಿದೆ. ಆದರೆ, ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ.

ಯಾವ್ಯಾವ ಸಂಸ್ಥೆಗಳು?: ಒಕ್ಕಲಿಗರ ಸಂಘ 81.27 ಕೋಟಿ ರೂ., ಪೀಪಲ್ ಎಜುಕೇಷನ್ ಸೊಸೈಟಿ 15.84 ಕೋಟಿ ರೂ., ಗೊಮ್ಮಟೇಶ ವಿದ್ಯಾಪೀಠ 14.91 ಕೋಟಿ ರೂ., ಆಕ್ಸ್ ಫರ್ಡ್ ಇಂಗ್ಲಿಷ್ ಮತ್ತು ಕನ್ನಡ ಶಾಲೆ 4.32 ಕೋಟಿ ರೂ., ದಂಡ ಪಾಣಿ ಜ್ಞಾನಮಂದಿರ 3.01 ಕೋಟಿ ರೂ., ಶ್ರೀ ಜಗದ್ಗುರು ರೇಣುಕಾಚಾರ್ಯ ಎಜುಕೇಷನ್ ಸೊಸೈಟಿ 2.95 ಕೋಟಿ ರೂ., ಕಾಸ್ಮೋಪಾಲಿಟನ್ ಎಜುಕೇಷನ್ ಟ್ರಸ್ಟ್ 2.75 ಕೋಟಿ ರೂ., ವಿಜಯಬ್ಯಾಂಕ್ ಎಂಪ್ಲಾಯಿಸ್ ಸೊಸೈಟಿ 2.59 ಕೋಟಿ ರೂ., ಉದಯ ವಿದ್ಯಾಕೇಂದ್ರ 2.40 ಕೋಟಿ ರೂ. ಹಾಗೂ ಕಾರ್ಮೆಲ್ ಎಜುಕೇಷನ್ ಸೊಸೈಟಿ 2.16 ಕೋಟಿ ರೂ. ಗರಿಷ್ಠ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳಾಗಿವೆ. ಇದಲ್ಲದೆ 34 ಸಂಸ್ಥೆಗಳು ಕೋಟಿಗಟ್ಟಲೆ ಹಣ ಬಾಕಿ ಉಳಿಸಿಕೊಂಡಿವೆ.