ಮಡಿಕೇರಿ: ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ ಬಿ.ಡಿ.ಜಗದೀಶ್ ರೈ ಅವಿರೋಧ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಸಂಘದ ಪ್ರಭಾರ ಅಧ್ಯಕ್ಷ ವಿ.ರವೀಂದ್ರ ರೈ ಅಧ್ಯಕ್ಷತೆಯಲ್ಲಿ ಭಾನುವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಡಿ.ಜಗದೀಶ್ ರೈರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಉದ್ಯಮಿ ವಿ.ರವೀಂದ್ರ ರೈ ಅವಿರೋಧ ಆಯ್ಕೆಯಾದರು.
ಸಭೆಯ ಆರಂಭದಲ್ಲಿ ಉಪಾಧ್ಯಕ್ಷ ಬಿ.ಕೆ.್ರವೀಂದ್ರ ರೈರವರು ಸಂಘ ಮತ್ತು ಟ್ರಸ್ಟ್‌ನ ಆಸ್ತಿಯ ಬಗ್ಗೆ ವಿವರಣೆ ನೀಡಿ ಮಾತನಾಡಿ, ಜಾಗದ ವಿಚಾರವಾಗಿ ಕೆಲವರು ದುರುದ್ದೇಶಪೂರಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಜಾಗದ ಬಗೆಗಿನ ಎಲ್ಲಾ ನಿಖರ ದಾಖಲೆಗಳು ಸಂಘದ ಬಳಿ ಇದ್ದು, ಯಾರು ಯಾವಾಗ ಬೇಕಾದರೂ ಪರಿಶೀಲಿಸಬಹುದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿ.ರವೀಂದ್ರ ರೈ ಮಾತನಾಡಿ, ಹಲವು ವರ್ಷಗಳ ಬಳಿಕ ಎಲ್ಲರು ಒಟ್ಟು ಸೇರಿದ್ದೇವೆ. ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಲವೇ ಕೆಲವರು ಸೇರಿ ಸಂಘದ ಸದಸ್ಯರನ್ನು ಗಮನಕ್ಕೆ ತೆಗೆದುಕೊಳ್ಳದೆ ತಾವೇ ಸಂಘ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಈ ಹಿಂದೆ ಆಡಳಿತ ಮಂಡಳಿ ಸಭೆ ಕರೆಯುವುದಕ್ಕೂ ಆಸಕ್ತಿ ತೋರಿಸಿರಲಿಲ್ಲ. ಹಲವು ಬಾರಿ ಗಡುವು ನೀಡಿದರೂ ಸಭೆ ಕರೆಯಲಿಲ್ಲ. ಜ.೮ರಂದು ಔತಣಕೂಟದ ಹೆಸರಿನಲ್ಲಿ ಸಭೆ ನಡೆಸಿ ಘೋಷಣೆ ಮಾಡಿಕೊಂಡಿದ್ದಾರೆ. ಸಂಘದ ಪದಾಧಿಕಾರಿಗಳಿಗೂ ಮಾಹಿತಿ ನೀಡಲಿಲ್ಲ. ಈಗ ಸಮಾಜದವರ ವಿರುದ್ಧವೇ ಕೆಟ್ಡದಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಡಿ.ಜಗದೀಶ್ ರೈ ಮಾತನಾಡಿ, ಮುಂದಿನ ದಿನದಲ್ಲಿ ಸಂಘದಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಮುಂದಿನ ದಿನದಲ್ಲಿ ಸಮುದಾಯಕ್ಕೆ ಬೇಕಾದ ಅಗತ್ಯ ಕೆಲಸ ಕಾರ್ಯಗಳನ್ನು ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡು ಮಾಡುವುದಾಗಿ ಹೇಳಿದರು.
ಸಮುದಾಯಕ್ಕೆ ಬಂಟರ ಭವನದ ಅಗತ್ಯತೆ ಇದೆ. ತನ್ನ ಆಡಳಿತಾವಧಿಯಲ್ಲಿ ಭವನ ನಿರ್ಮಾಣ ಮಾಡಿ ತೋರಿಸುವುದಾಗಿ ಭರವಸೆ ನೀಡಿದ ಅವರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿ ತಿಳಿಸಿದರು.
ಸಂಘದ ಬೆಳವಣಿಗೆ ಬಗ್ಗೆ ಹಲವರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಬಿ.ಸಿ.ಹರೀಶ್ ರೈ ವರದಿ ವಾಚಿಸಿದರು. ಖಜಾಂಚಿ ಬಿ.ಎನ್.ರತ್ನಾಕರ ರೈ ಆರ್ಥಿಕ ವರದಿ ಮಂಡಿಸಿದರು. ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ ಪ್ರಾಸ್ತಾವಿಕ ಮಾತನಾಡಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜನಾರ್ದನ ಶೆಟ್ಟಿ, ವಿರಾಜಪೇಟೆ ತಾಲೂಕು ಅಧ್ಯಕ್ಷ ದುಷ್ಯಂತ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ ಉಪಸ್ಥಿತರಿದ್ದು, ನೂತನ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದರು. ಬಾಲಕೃಷ್ಣ ರೈ, ಕಿಶೋರ್ ರೈ ಕತ್ತಲೆಕಾಡು, ಹಿತ ಯೋಗೇಶ್ ಶೆಟ್ಟಿ, ಹರೀಶ್ ರೈ ಇತರರಿದ್ದರು.
ರತ್ನಾಕರ ಶೆಟ್ಟಿ ಉಚ್ಛಾಟನೆ
ಬಂಟರ ಸಂಘದ ಗಮನಕ್ಕೆ ತರದೆ ಸಂಘದ ಅಧ್ಯಕ್ಷ ಸ್ಥಾನದ ಸ್ವಯಂ ಘೋಷಣೆ ಮಾಡಿಕೊಂಡ ಮತ್ತು ಪದಾಧಿಕಾರಿಗಳ ಬಗ್ಗೆ ಮತ್ತು ಜನಾಂಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ವಿರಾಜಪೇಟೆಯ ರತ್ನಾಕರ ಶೆಟ್ಟಿ ಅವರನ್ನು ಸಭೆಯಲ್ಲಿದ್ದ ಸರ್ವ ಸದಸ್ಯರ ಒಕ್ಕೊರಳ ಆಗ್ರಹದ ಮೇರೆಗೆ ಸರ್ವಾನುಮತದೊಂದಿಗೆ ಜಿಲ್ಲಾ ಬಂಟರ ಸಂಘದಿಂದ ಅನಿರ್ದಿಷ್ಟಾವಧಿಗೆ ಉಚ್ಛಾಟನೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.