ಮೈಸೂರು: ಉನ್ನತ ಶಿಕ್ಷಣ ಪಡೆಯಲು ಪ್ರತಿಯೊಬ್ಬರು ಪ್ರಯತ್ನ ನಡೆಸಬೇಕು. ಉನ್ನತ ಶಿಕ್ಷಣವು ನಿಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ವಿಜಯನಗರ 2ನೇ ಹಂತದ ಕೃಷಿಕ್ ಸರ್ವೋದಯ ಫೌಂಡೇಷನ್, ಕೆಎಸ್‌ಎಫ್ ಸ್ಕೂಲ್ ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ವತಿಯಿಂದ ಗುರುವಾರ ಆಯೋಜಿಸಿದ್ದ ಬಿಕಾಂ ಮತ್ತು ಬಿಸಿಎ ಕೋರ್ಸ್‌ಗಳ ಕಾರ್ಯಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉನ್ನತ ಶಿಕ್ಷಣ ಪಡೆದಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯ. ಕೆಲವು ಕೋರ್ಸ್‌ಗಳಿಗೆ ಸಹನೆ ಮುಖ್ಯವಾದರೆ, ಮತ್ತೆ ಕೆಲವುಗಳಿಗೆ ಚುರುಕುತನ, ಸೃಜನಶೀಲತೆ ಮುಖ್ಯ. ರಕ್ಷಣಾ ವಿಭಾಗದಲ್ಲಿ ನಿಮಗೆ ಆಸಕ್ತಿ ಇದ್ದರೆ ಧೈರ್ಯ, ಅರ್ಪಣಾ ಮನೋಭಾವ ಮುಖ್ಯ ಎಂದು ಹೇಳಿದರು.
ಸರ್ಕಾರಿ ನೇಮಕಾತಿಗಳಿಗೆ ಕೆಲವೊಮ್ಮೆ ಹಲವು ವರ್ಷಗಳು ಕಾಯಬೇಕಾಗುತ್ತದೆ. ಹೀಗಾಗಿ ಯುವಜನರು ಸರ್ಕಾರಿ ಕೆಲಸ ಪಡೆಯುವ ಗುರಿ ಇದ್ದರೂ ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸಿ ಉತ್ತಮ ಅನುಭವವನ್ನು ಪಡೆದುಕೊಳ್ಳಬೇಕು. ಆ ನಂತರ ಸರ್ಕಾರ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ ನಂತರ ಸರ್ಕಾರಿ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಂಯೋಜಕಿ ಎಂ.ವಿ.ಜ್ಯೋತಿ, ಕೃಷಿಕ್ ಸರ್ವೋದಯ ಫೌಂಡೇಷನ್ ಅಧ್ಯಕ್ಷ ಪ್ರೊ.ಎನ್.ಎಸ್. ರಾಮೇಗೌಡ, ಉಪಾಧ್ಯಕ್ಷರಾದ ಬಿ.ಕೆ.ಶಿವಣ್ಣ, ಎನ್. ನಂಜೇಗೌಡ, ಕಾರ್ಯದರ್ಶಿ ಎಚ್. ಕಿಶೋರ್‌ಚಂದ್ರ, ಜಂಟಿ ಕಾರ್ಯದರ್ಶಿ ವೈ.ಕೆ.ಕೆಂಚೇಗೌಡ, ನಿರ್ದೇಶಕ ಡಾ.ಬಿ.ಶಂಕರ್, ಟ್ರಸ್ಟಿ ಕೆ.ಎಂ.ಚಂದ್ರೇಗೌಡ ಹಾಘೂ ಇತರರು ಇದ್ದರು.