ಜಿಲ್ಲೆ

ಬಿಬಿಎಂಪಿಗೆ ನಕ್ಷೆ ಮಂಜೂರಾತಿ ಅಧಿಕಾರ ವಾಪಸ್​: ನಗರಾಭಿವೃದ್ಧಿ ಇಲಾಖೆಯಿಂದ ಆದೇಶ

ಆರ್.ತುಳಸಿಕುಮಾರ್

ಬೆಂಗಳೂರು: ಬಿಡಿಎ ಬಳಿ ಇದ್ದ ಏಕ ನಿವೇಶನದ ವಿನ್ಯಾಸ ನಕ್ಷೆ ಮಂಜೂರಾತಿ ನೀಡುವ ಅಧಿಕಾರವನ್ನು ಬಿಬಿಎಂಪಿಗೆ ವರ್ಗಾಯಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ನಗರ ಹಾಗೂ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 17ರಡಿ ಇದ್ದ ಅಧಿಕಾರದಂತೆ ಈವರೆಗೆ ಬಿಡಿಎ ನಕ್ಷೆ ಮಂಜೂರಾತಿ ನೀಡುತ್ತಿತ್ತು. ಈ ಮುನ್ನ ಇದೇ ಅಧಿಕಾರವು ಬಿಬಿಎಂಪಿ ಬಳಿ ಇತ್ತು. ಯೋಜನಾ ಪ್ರಾಧಿಕಾರದ ಅಧಿಕಾರವನ್ನು ಅನ್ಯರು ಚಲಾಯಿಸಲು ಬರುವುದಿಲ್ಲ ಹಾಗೂ ಜಮೀನಿಗೆ ಸಂಬಂಧಿಸಿದ ವಿಚಾರದಲ್ಲಿ ಅನಗತ್ಯ ಗೊಂದಲ ನಿವಾರಿಸಲು ಪಾಲಿಕೆ ಬಳಿಯಿದ್ದ ಅಧಿಕಾರವನ್ನು ಬಿಡಿಎಗೆ ವರ್ಗಾಯಿಸಿ ಸರ್ಕಾರ ಕಳೆದ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿತ್ತು. ಆದರೀಗ ಮತ್ತೆ ಆ ಅಧಿಕಾರವನ್ನು ಪಾಲಿಕೆಗೆ ಮರು ವರ್ಗಾಯಿಸಲಾಗಿದೆ.

ಈ ಆದೇಶ ಅನ್ವಯ 10 ಸಾವಿರ ಚದರ ಮೀಟರ್ ವಿಸ್ತೀರ್ಣದವರೆಗಿನ ಏಕ ನಿವೇಶನಗಳಿಗೆ ನಕ್ಷೆ ಮಂಜೂರಾತಿಯನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ವಹಿಸಲಾಗಿದೆ. ಈ ಮಿತಿಗಿಂತ ಹೆಚ್ಚಿನ ವಿಸ್ತೀರ್ಣದ ಏಕ ನಿವೇಶನಗಳಿಗೆ ಬಿಡಿಎ ನಕ್ಷೆ ಮಂಜೂರಾತಿ ನೀಡಲಿದೆ.

ಅಧಿಕಾರ ಬದಲಾವಣೆ ಏಕೆ?:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಣ್ಣ ವಿಸ್ತೀರ್ಣದ ಸೈಟ್‌ಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ನಕ್ಷೆ ಮಂಜೂರಾತಿ ಪಡೆಯಲು ಸಾರ್ವಜನಿಕರು ಅಲೆದಾಟ ನಡೆಸಬೇಕಿತ್ತು. ಬಿಬಿಎಂಪಿಯಿಂದ ಬಿಡಿಎಗೆ ಅಧಿಕಾರ ವರ್ಗಾಯಿಸಿದ ಬಳಿಕ ಜನರು ಮತ್ತಷ್ಟು ಸಮಸ್ಯೆ ಎದುರಿಸುವಂತಾಯಿತು. ಬಿಡಿಎ ಕಚೇರಿಗಳಿಗೆ ಹಲವು ಬಾರಿ ಸುತ್ತಾಡಿದರೂ, ತ್ವರಿತವಾಗಿ ಸೌಲಭ್ಯ ಸಿಗುತ್ತಿರಲಿಲ್ಲ. ಈ ವಿಚಾರವಾಗಿ ಸಾರ್ವಜನಿಕರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ ಎಂದಿನಂತೆ ಪಾಲಿಕೆಗೆ ಅಧಿಕಾರ ಇರುವಂತಹ ವ್ಯವಸ್ಥೆ ತರುವಂತೆ ಒತ್ತಾಯಿಸಿದ್ದರು. ಇದರ ವಿಚಾರವಾಗಿ ಡಿಸಿಎಂ ಅಧಿಕಾರಿಗಳ ಜತೆ ಸಭೆ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಆಗದಂತೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ನಿರ್ಧಾರ ಕೈಗೊಳ್ಳಲು ಪರಿಹಾರ ಕೋರಿದ್ದರು. ಇದರ ಫಲವೇ ಈಗಿನ ಆದೇಶ ಹೊರಬಿದ್ದಿದೆ.