ಜಿಲ್ಲೆ

ಡಿಸಿಎಂ ಮನವೋಲಿಕೆ: ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ ವಾಪಸ್

ಆರ್.ತುಳಸಿಕುಮಾರ್

ಬೆಂಗಳೂರು: ಬಾಕಿ ಬಿಲ್ ಪಾವತಿಗೆ ಒತ್ತಾಯಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಬಿಬಿಎಂಪಿ ಗುತ್ತಿಗೆದಾರರ ಸಂಘದೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಸಿದ ಸಂಧಾನದ ಲವಾಗಿ ಬುಧವಾರ ಸಂಜೆಯಿಂದ ಉಪವಾಸ ಸತ್ಯಾಗ್ರಹವನ್ನು ಕೈಬಿಡಲಾಗಿದೆ.

ಪಾಲಿಕೆಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗುತ್ತಿಗೆದಾರರು ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸಂಜೆಯವರೆಗೂ ಪಾಲಿಕೆ ಹಾಗೂ ಸರ್ಕಾರದ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಲಯ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಡಿಸಿಎಂ ಅವರು ಸಂಘದ ಪದಾಧಿಕಾರಿಗಳನ್ನು ಕರೆಯಿಸಿ ಸಂಧಾನ ನಡೆಸಿದರು. ವಾರದೊಳಗೆ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಸಂಘವು ಪ್ರತಿಭಟನೆಯನ್ನುಯ ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿತು.

ಹಣ ಬಿಡುಗಡೆ ಆಗದಿದ್ದಲ್ಲಿ ಮತ್ತೆ ಪ್ರತಿಭಟನೆ:

ಪ್ರತಿಭಟನೆ ವಾಪಸ್ ಪಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್, ಮೂರು ವರ್ಷದ ಕಾಮಗಾರಿಗಳಿಗೆ ಶೇ.25 ಮೊತ್ತದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿದ್ದರೂ, ಪಾಲಿಕೆ ಮುಖ್ಯಸ್ಥರು ಸ್ಪಂದಿಸಿರಲಿಲ್ಲ. ಈ ಕಾರಣದಿಂದ ಪ್ರತಿಭಟನೆ ಆರಂಭಿಸಲಾಗಿತ್ತು. ಈಗ ಡಿಸಿಎಂ ಅವರು ವಾರದೊಳಗೆ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಒಂದು ವೇಳೆ ಗಡುವಿನೊಳಗೆ ಹಣ ಬಿಡುಗಡೆ ಮಾಡದಿದ್ದರೆ ಮತ್ತೆ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ.ರವೀಂದ್ರ, ಹನುಮಂತಯ್ಯ, ಚಿಕ್ಕಹೊಂಬಯ್ಯ, ವಿ.ಮಯೂರ್, ಎಸ್.ಜಿ.ಮಂಜುನಾಥ್, ಪುರುಷೋತ್ತಮರಾಜು ಹಾಗೂ ಇತರರಿದ್ದರು.