ಜಿಲ್ಲೆ

ಬಿಬಿಎಂಪಿ ತ್ಯಾಜ್ಯ ನಿಯಮ ಉಲ್ಲಂಘನೆಗೆ ದಂಡ

vinaymk1969
ಬೆಂಗಳೂರು: ತ್ಯಾಜ್ಯ ನಿಯಮ ಉಲ್ಲಂಘನೆ ಮಾಡುವವರಿಗೆ ದುಬಾರಿ ದಂಡ ಪ್ರಯೋಗ ಮಾಡಲು ‘ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪ ನಿಯಮ 2020’ಕ್ಕೆ ಸರ್ಕಾರ ಗೆಜೆಟ್ ಹೊರಡಿಸಿದೆ. ಪ್ರತಿಯೊಬ್ಬ ನಾಗರಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವನ ಮಾಡುತ್ತಿದ್ದಲ್ಲಿ ತ್ಯಾಜ್ಯ ನಿರ್ವಹಣೆ ಕರದಿಂದ ತಪ್ಪಿಸಿಕೊಳ್ಳಲು ಸಾಧ್ಯ ವಿಲ್ಲ. ಪ್ರತಿಯೊಂದು ಮನೆ, ಆಸ್ತಿ, ಕೈಗಾರಿಕೆ, ಹೋಟೆಲ್, ಮಾಲ್, ರೆಸ್ಟೋರೆಂಟ್, ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು, ಉದ್ಯಮ ಆಧಾರಿತ ಕಟ್ಟಡಗಳು ಹಾಗೂ ಸಾರ್ವಜನಿಕ ಸ್ಥಳದ ಬಳಕೆಯಿಂದ ಉತ್ಪಾದನೆಯಾಗುವ ಕಸಕ್ಕೂ ಹಣ ಪಾವತಿಸಬೇಕಿದೆ. ವಾಸ ಸ್ಥಳ ಹಾಗೂ ಉದ್ಯಮ ಸಂಬಂಧಿತ ಕಟ್ಟಡಗಳಿಗೆ ವಿಸ್ತೀರ್ಣ ಹಾಗೂ ಅಲ್ಲಿ ಸೇರುವ ಜನಸಂಖ್ಯೆ ಆಧಾರದಲ್ಲಿ ಕರ ವಸೂಲಿ ಮಾಡಲಾಗುತ್ತದೆ.
ಶೇ.50 ಕರ ರಿಯಾಯಿತಿ: ಮನೆಗಳು, ಅಪಾರ್ಟ್ ಮೆಂಟ್​ಗಳು, ಹೋಟೆಲ್​ಗಳು, ಮದುವೆ ಛತ್ರಗಳು, ರೆಸ್ಟೋರೆಂಟ್ ಹಾಗೂ ಮಾಲ್​ಗಳು ಸೇರಿ ಎಲ್ಲ ತ್ಯಾಜ್ಯ ಉತ್ಪಾದಕರು ತಮ್ಮಿಂದ ಉಂಟಾದ ಕಸವನ್ನು ಆಯಾ ವಾರ್ಡ್ ವ್ಯಾಪ್ತಿಯಲ್ಲಿಯೇ ಗೊಬ್ಬರವಾಗಿ ಪರಿವರ್ತನೆ ಮಾಡಿದಲ್ಲಿ ಘನತ್ಯಾಜ್ಯ ಶೇ.50 ಕರ ರಿಯಾಯಿತಿ ದೊರೆಯುತ್ತದೆ. ಆದರೆ, ಈ ನಿಯಮ ತ್ಯಾಜ್ಯ ಸಂಗ್ರಹಿಸಿ ಗೊಬ್ಬರ ಮಾಡುವ ಏಜೆನ್ಸಿ ಅಥವಾ ಸಂಘ-ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.

ಸಮಾರಂಭಗಳಿಗೆ ವಿಶೇಷ ತೆರಿಗೆ: ಪಾಲಿಕೆ ವ್ಯಾಪ್ತಿಯ ಯಾವುದೇ ಹೋಟೆಲ್, ಸಮುದಾಯ ಭವನ, ಕಟ್ಟಡ, ನಿವೇಶನಗಳಲ್ಲಿ ಕನಿಷ್ಠ ಒಂದು ವಾರಕ್ಕಿಂತ ಮೇಲ್ಪಟ್ಟು ನಡೆಯುವ ವಸ್ತುಪ್ರದರ್ಶನ, ಮನೋರಂಜನಾ ಕಾರ್ಯಕ್ರಮ, ಮದುವೆ ಸಮಾರಂಭಗಳಿಂದ ಉಂಟಾಗುವ ತ್ಯಾಜ್ಯಕ್ಕೆ ಪ್ರತ್ಯೇಕ ಕರ ವಿಧಿಸಲಾಗುತ್ತದೆ. ಒಂದು ವಾರಕ್ಕೆ 1,500 ರೂ., ಹಾಗೂ ತಿಂಗಳ ಅವಧಿಗೆ 3 ಸಾವಿರ ರೂ., ಒಂದು ತಿಂಗಳಿಗಿಂತ ಮೇಲ್ಪಟ್ಟರೆ 6 ಸಾವಿರ ರೂ. ತ್ಯಾಜ್ಯ ಕರ ಪಾವತಿಸಬೇಕು. ಸರ್ಕಾರಿ ಪ್ರಾಯೋಜಕತ್ವವಿಲ್ಲದ ಕಾರ್ಯಕ್ರಮಗಳಿಗೆ ಮರುಪಾವತಿಸಬಹುದಾದ ಸ್ವಚ್ಛತಾ ಠೇವಣಿಯನ್ನು ಆಯೋಜಕರು ಪಾಲಿಕೆಗೆ ಪಾವತಿಸಬೇಕು.

ಎಸ್ಕ್ರೋ ಖಾತೆಗೆ ದಂಡದ ಹಣ: ಬಿಬಿಎಂಪಿ ಘನತ್ಯಾಜ್ಯ ಉಪನಿಯಮ ಮೀರಿದವರಿಗೆ ಆರೋಗ್ಯ ಇಲಾಖೆ ಹಿರಿಯ ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್​ಗಳು, ವಾರ್ಡ್​ವುಟ್ಟದ ನೋಡಲ್ ಅಧಿಕಾರಿ, ಅಧೀಕ್ಷಕ ಇಂಜಿನಿಯರ್​ಗಳು ದಂಡ ವಿಧಿಸಬಹುದಾಗಿದೆ. 5 ಲಕ್ಷ ರೂ.ಗಳಿಗೂ ಅಧಿಕ ದಂಡ ವಿಧಿಸಿದಲ್ಲಿ ಮೇಲ್ಮನವಿ ವಿಚಾರಣೆಯನ್ನು ಆಯಾ ವಲಯದ ಜಂಟಿ ಆಯುಕ್ತರು ಕೈಗೊಂಡು ಏಳು ದಿನಗಳ ಒಳಗಾಗಿ ತೀರ್ಮಾನ ಪ್ರಕಟಿಸಬೇಕು. ದಂಡ ಮೊತ್ತವನ್ನು ಘನತ್ಯಾಜ್ಯ ನಿರ್ವಹಣೆಗಾಗಿ ತೆರೆಯಲಾಗಿರುವ ಸೀಮಿತ ಬ್ಯಾಂಕ್ ಖಾತೆಗ (ಎಸ್ಕ್ರೋ ಬ್ಯಾಂಕ್ ಖಾತೆ) ವರ್ಗಾಯಿಸಬೇಕು. ಈ ಹಣವನ್ನು ತ್ಯಾಜ್ಯ ನಿರ್ವಹಣೆ, ಸ್ವಚ್ಛತಾ ಕಾರ್ವಿುಕರ ವೇತನ, ಪ್ರೋತ್ಸಾಹಧನಕ್ಕೆ ಮಾತ್ರ ಬಳಸಬೇಕು.