ಬೆಂಗಳೂರು: ರಾಜ್ಯ ಸರ್ಕಾರವು ಶುಕ್ರವಾರ ರಾತ್ರಿ ಹೊಸದಾಗಿ ಪ್ರಕಟಿಸಿರುವ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಪಟ್ಟಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ, ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚಕ್ಕುಬಂದಿಯನ್ನೂ ಅವೈಜ್ಞಾನಿಕವಾಗಿ ರಚಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
243 ವಾರ್ಡ್‌ಗಳಿಂದ 225 ವಾರ್ಡ್‌ಗಳಿಗೆ ನಿಗದಿಗೊಳಿಸಿ ರಾಜ್ಯಪತ್ರ ಪ್ರಕಟಿಸಲಾಯಿತು. ಇದರಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹೆಚ್ಚಿನ ವಾರ್ಡ್‌ಗಳನ್ನು ಕಡಿತಗೊಳಿಸಿರುವ ಬಗ್ಗೆ ಗಂಭೀರ ಆರೋಪಗಳಿವೆ. ಬಿಜೆಪಿ ಗೆಲ್ಲುವ ವಾರ್ಡ್‌ಗಳನ್ನು ವಿಭಜಿಸಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಇರುವ ಪ್ರದೇಶಗಳಿಗೆ ಸೇರ್ಪಡೆ ಮಾಡಿ ಹೊಸ ವಾರ್ಡ್‌ಗಳನ್ನು ರಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಜನಗಣತಿ ವರದಿ ಆಧಾರದ ಮೇರೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 35 ಸಾವಿರ ಜನಸಂಖ್ಯೆಯಂತೆ ವಾರ್ಡ್‌ಗಳನ್ನು ರಚಿಸಲಾಗಿತ್ತು. ಈಗ 37,527 ಜನಸಂಖ್ಯೆಗೊಂದರಂತೆ ವಾರ್ಡ್‌ಗಳನ್ನು ರಚಿಸಲಾಗಿದೆ. ಬಿಜೆಪಿ ಶಾಸಕರಾಗಿರುವ ಕ್ಷೇತ್ರಗಳಲ್ಲಿ ಒಟ್ಟು 18 ವಾರ್ಡ್‌ಗಳನ್ನು ಕಡಿತಗೊಳಿಸಿ 225ಕ್ಕೆ ವಿಂಗಡಣೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಬದಲಾವಣೆ ಮಾಡದೆ, ಮುಂಬರುವ ಚುನಾವಣೆಯಲ್ಲಿ ಸುಲಭವಾಗಿ ಜಯ ಸಾಧಿಸಲು ಕಾಂಗ್ರೆಸ್ ಸರ್ಕಾರ, ತಮ್ಮ ಅನುಕೂಲಕ್ಕೆ ತಕ್ಕಂತೆ ವಾರ್ಡ್‌ಗಳನ್ನು ವಿಂಗಡಿಸಿದೆ ಎಂದು ಬಿಜೆಪಿ ದೂರಿದೆ.
ಬಿಜೆಪಿ ಅವಧಿಯಲ್ಲಿ ವಾರ್ಡ್‌ಗಳಿಗೆ ಛತ್ರಪತಿ ಶಿವಾಜಿ, ಚಾಣಕ್ಯ, ಕನ್ನೇಶ್ವರ ರಾಮ, ವೀರಮದಕರಿ, ರಣಧೀರ ಕಂಠೀರವ, ವೀರಸಿಂಧೂರ ಲಕ್ಷ್ಮಣ, ವಿಜಯನಗರ, ಕೃಷ್ಣದೇವರಾಯ, ಸರ್ ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ಇತಿಹಾಸ ಪುರುಷರ ಹೆಸರುಗಳನ್ನು ಇಡಲಾಗಿತ್ತು. ಇವೆಲ್ಲವನ್ನು ತೆಗೆದುಹಾಕಿ ಹೊಸ ಪ್ರದೇಶಕ್ಕೆ ತಕ್ಕಂತೆ ವಾರ್ಡ್‌ಗಳಿಗೆ ಹೆಸರು ಇಡಲಾಗಿದೆ. ಕೆಲ ಕ್ಷೇತ್ರಗಳಲ್ಲಿ 2-3 ಹಳೆಯ ವಾರ್ಡ್‌ಗಳನ್ನು ತೆಗೆದು ಹಾಕಿ ಹೊಸದಾಗಿ ಸೇರಿಸಲಾಗಿದೆ. ಕಾಂಗ್ರೆಸ್ ಶಾಸಕರ ಕೆಲ ಕ್ಷೇತ್ರಗಳಲ್ಲಿ ಒಂದೆರೆಡು ವಾರ್ಡ್‌ಗಳನ್ನು ಕೈಬಿಟ್ಟು, ಬಿಜೆಪಿ ಪ್ರತಿನಿಧಿಸುವ ಕ್ಷೇತ್ರಗಳ ವಾರ್ಡ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಬೊಮ್ಮನಹಳ್ಳಿ, ಪದ್ಮನಾಭನಗರ, ರಾಜರಾಜೇಶ್ವರಿ ನಗರ, ಹಲಹಂಕ, ಕೆ.ಆರ್.ಪುರ, ಮಹದೇವಪುರ, ಯಶವಂತಪುರ, ಚಿಕ್ಕಪೇಟೆ ಹಾಗೂ ಸಿ.ವಿ.ರಾಮನ್‌ನಗರ ಸೇರಿ ಇತರ ಕ್ಷೇತ್ರಗಳಲ್ಲಿ ಹಳೆಯ ವಾರ್ಡ್‌ಗಳನ್ನು ತೆಗೆದು ಹೊಸ ವಾರ್ಡ್‌ಗಳನ್ನು ಸೇರಿಸಲಾಗಿದೆ.
ಕೈಬಿಟ್ಟಿರುವ ವಾರ್ಡ್‌ಗಳ ವಿವರ: ಯಲಹಂಕ ಕ್ಷೇತ್ರದಲ್ಲಿ ಸೋಮೇಶ್ವರ ವಾರ್ಡ್, ದಾಸರಹಳ್ಳಿ ಕ್ಷೇತ್ರದಲ್ಲಿ ಶೆಟ್ಟಿಹಳ್ಳಿ, ಡಿೆನ್ಸ್ ಕಾಲನಿ ವಾರ್ಡ್, ಕೆ.ಆರ್.ಪುರ ಕ್ಷೇತ್ರದಲ್ಲಿ ಬಾಬುಸಾಬ್ ಪಾಳ್ಯ, ಮೆದಹಳ್ಳಿ, ಮಹದೇವಪುರ ವಾರ್ಡ್, ಮಹದೇವಪುರದ ಕ್ಷೇತ್ರದಲ್ಲಿ ಹಗದೂರು, ದೊಡ್ಡಕನ್ನಹಳ್ಳಿ ವಾರ್ಡ್‌ಗಳನ್ನು ಕೈಬಿಡಲಾಗಿದೆ. ಅದೇರೀತಿ, ರಾಜರಾಜೇಶ್ವರಿ ಕ್ಷೇತ್ರದಲ್ಲಿ 2 ವಾರ್ಡ್, ಯಶವಂತಪುರ ಕ್ಷೇತ್ರದಲ್ಲಿ ವಿದ್ಯಾರಣ್ಯನಗರ, ದೊಡ್ಡಗೊಲ್ಲರಹಟ್ಟಿ, ರಾಜಾಜಿನಗರ ಕ್ಷೇತ್ರದಲ್ಲಿ ರಾಜಾಜಿನಗರ, ಮಹಾಲಕ್ಷ್ಮೀಲೇಔಟ್ ಕ್ಷೇತ್ರದಲ್ಲಿ ಜೈಮಾರುತಿ ನಗರ, ಬಸವನಗುಡಿ ಕ್ಷೇತ್ರದಲ್ಲಿ ಶ್ರೀನಿವಾಸನಗರ ವಾರ್ಡ್‌ವನ್ನು ತೆಗೆದುಹಾಕಲಾಗಿದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಉಮಾಮೇಶ್ವರಿ, ವಿಕ್ರಂನಗರ, ಕಾಮಕ್ಯನಗರ, ದೀನದಯಾಳು ವಾರ್ಡ್, ಜಯನಗರ ಕ್ಷೇತ್ರದಲ್ಲಿ ತಿಲಕ್‌ನಗರ ವಾರ್ಡ್, ಚಿಕ್ಕಪೇಟೆ ಕ್ಷೇತ್ರದಲ್ಲಿ ಸುಧಾಮನಗರ, ಅಶೋಕ ಪಿಲ್ಲರ್ ವಾರ್ಡ್, ಪುಲಿಕೇಶಿನಗರ ಕ್ಷೇತ್ರದಲ್ಲಿ ದೇವರಜೀವನಪಾಳ್ಯ, ಸರ್ವಜ್ಞನಗರ ಕ್ಷೇತ್ರದಲ್ಲಿ ವೆಂಕಟೇಶಪುರ, ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಲಾಲ್ ಬಹದ್ದೂರ್ ನಗರ, ಹೊಸ ಬಯ್ಯಪನಹಳ್ಳಿ, ಹಳೇ ತಿಪ್ಪಸಂದ್ರ, ಜಲಕಂಠೇಶ್ವರ ನಗರ, ಶಿವಾಜಿನಗರ ಕ್ಷೇತ್ರದಲ್ಲಿ ಜಯಮಹಲ್ ವಾರ್ಡ್ ಕೈಬಿಡಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಚುಂಚನಘಟ್ಟ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಗರ, ಎಚ್‌ಎಸ್‌ಆರ್ ಸಿಂಗ್ರಸಂದ್ರ, ದೇವರಚಿಕ್ಕನಹಳ್ಳಿ, ಅರಕೆರೆ, ವಿನಾಯಕನಗರ ವಾರ್ಡ್‌ಗಳನ್ನು ತೆಗೆದುಹಾಕಲಾಗಿದೆ.
ಹೈಕೋರ್ಟ್ ಆದೇಶಿಸಿತ್ತು: ಹಿಂದಿನ ಬಿಜೆಪಿ ಸರ್ಕಾರವು 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿ ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದಿತ್ತು. ಆದರೆ, ಇದನ್ನು ಪ್ರಶ್ನಿಸಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸೇರಿ ಇತರರು, ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಕೋರ್ಟ್, ನಿಗದಿತ ಮಾರ್ಗಸೂಚಿ, ಕಾನೂನಿನ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ವಾರ್ಡ್ ಮರು ವಿಗಂಡಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಪಾಲಿಕೆ ವಾರ್ಡ್‌ಗಳ ಮರುವಿಂಗಡಣಾ ಆಯೋಗವನ್ನು ರಚಿಸಿ ಸರ್ಕಾರ ಆದೇಶಿಸಿತ್ತು. ಈ ಆಯೋಗ ಹೊಸದಾಗಿ ವಾರ್ಡ್‌ಗಳ ವಿಂಗಡಣೆ ಪಟ್ಟಿ ರಚಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.
ವೆಬ್‌ಸೈಟ್‌ನಲ್ಲಿ ಲಭ್ಯ: ಪಾಲಿಕೆಯ ವಾರ್ಡ್‌ಗಳ ಪುನರ್ ವಿಂಗಡಣೆ ಕರಡು ಪ್ರತಿಯನ್ನು erajyapatra.karnataka. gov.in ನಲ್ಲಿವೀಕ್ಷಿಸಬಹುದು. ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಅಧಿಸೂಚನೆ ಅನ್ವಯ ಹೊಸದಾಗಿ ಪ್ರಕಟಿಸಿರುವ ವಾರ್ಡ್‌ಗಳ ಹೆಸರು ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು - 1 ಈ ವಿಳಾಸಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬಹಹುದು.