ಜಿಲ್ಲೆ

ಪಾಲಿಕೆ ಯುಸಿಸಿ ಪೋರ್ಟಲ್ ಅಭಿವೃದ್ಧಿ; ಬೆರಳತುದಿಯಲ್ಲಿ 8ಕ್ಕೂ ಅಧಿಕ ಸೇವೆ; ಲಭ್ಯ ಬೆಂಗಳೂರು 2.0 ಆ್ಯಪ್​ ಜೋಡಣೆ

| ಸತೀಶ್ ಕಂದಗಲ್​ಪುರ ಬೆಂಗಳೂರು

ಪಾಲಿಕೆಯ 8ಕ್ಕೂ ಅಧಿಕ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರುವ ‘ಏಕೀಕೃತ ಜನಸಂಪರ್ಕ ವೇದಿಕೆ (ಯುನಿಫೈಡ್ ಸಿಟಿಜನ್ ಕನೆಕ್ಟ್-ಯುಸಿಸಿ)’ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಪ್ರಾಯೋಗಿಕವಾಗಿ ಪೋರ್ಟಲ್ ಅನ್ನು ಪಾಲಿಕೆ ವೆಬ್​ಸೈಟ್ ಆಗಿ ಬಳಸುವ ಅವಕಾಶ ನೀಡಿದ್ದು, ಅಗತ್ಯ ಸಲಹೆಗಳನ್ನು ನೀಡಲು ಪ್ರತ್ಯೇಕ ಕೊಂಡಿ ನೀಡಲಾಗಿದೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ನಗರವನ್ನು ‘ಬೆಂಗಳೂರು ಮಿಷನ್- 2022’ ಯೋಜನೆ ಜಾರಿಗೆ ತಂದಿದ್ದರು. ಇದರಡಿ ಸುಗಮ ಸಂಚಾರ (ಆರ್ಟೀರಿಯಲ್ ರಸ್ತೆ ಅಭಿವೃದ್ಧಿ), ಹಸಿರು ಬೆಂಗಳೂರು (ವೃಕ್ಷೋದ್ಯಾನಗಳು), ಸ್ವಚ್ಛ ಬೆಂಗಳೂರು (ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ) ಹಾಗೂ ಪಾಲಿಕೆಯ ಎಲ್ಲ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಏಕೀಕೃತ ಜನ ಸಂಪರ್ಕ (ಯುಸಿಸಿ) ಆಪ್ ಮತ್ತು ಪೋರ್ಟಲ್ ಅಭಿವೃದ್ಧಿ ಮಾಡುವ ಆಶಯದಿಂದ ಯೋಜನೆಗೆ ಚಾಲನೆ ನೀಡಿದ್ದರು. ಅವರ ಆಶಯದಂತೆ ಪಾಲಿಕೆ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದಿಂದ ಯೂನಿಪೈಡ್ ಸಿಟಿಜನ್ ಕನೆಕ್ಟ್ ವೆಬ್​ಸೈಟ್ ಪೋರ್ಟಲ್ ಸಿದ್ಧಪಡಿಸಿ, ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಪೋರ್ಟಲ್​ನ ವಿಶೇಷತೆಗಳೇನು?: ಸರ್ಕಾರದ ಎಲ್ಲ ಇಲಾಖೆಗಳು, ಸಂಸ್ಥೆಗಳು ಹಾಗೂ ಪ್ರಾಧಿಕಾರಗಳ ವೆಬ್​ಸೈಟ್​ನ ಪೋರ್ಟಲ್​ಗಳು ಕೇವಲ ಪರಿಚಯಾತ್ಮಕ ಮುಖಪುಟ ಹೊಂದಿರುತ್ತವೆ. ಜನರಿಗೆ ಇಲಾಖೆ ಕುರಿತಾದ ಮಾಹಿತಿ, ಹಿನ್ನೆಲೆ, ಉದ್ದೇಶ, ಸೇವೆಗಳು, ಯೋಜನೆಗಳು ಮತ್ತು ಸಂಪರ್ಕ ಸಂಖ್ಯೆ ಒಳಗೊಂಡಿದ್ದು, ಜನರ ಪ್ರತಿಕ್ರಿಯೆಗೆ ಅವಕಾಶವಿರದೇ ಏಕಮುಖವಾಗಿ ಮಾಹಿತಿ ನೀಡುತ್ತವೆ. ಆದರೆ, ಪ್ರಸ್ತುತ ಬಿಬಿಎಂಪಿ ಅಭಿವೃದ್ಧಿಪಡಿಸಿದ ಯುಸಿಸಿ ಪೋರ್ಟಲ್ ಸಂವಾದಾತ್ಮಕ ವ್ಯವಸ್ತೆಯನ್ನು ಹೊಂದಿದೆ. ಜನರು ಪೋರ್ಟಲ್ ಬಳಕೆ ಜತೆಗೆ ಅದರಲ್ಲಿರುವ ಸೇವೆಗಳನ್ನು ಪಡೆಯಬಹುದು. ಯಾವುದೇ ಸಮಸ್ಯೆಗಳಿದ್ದರೂ ಈ ಬಗ್ಗೆ ಪೋರ್ಟಲ್ ಮೂಲಕವೇ ‘ಕುಂದುಕೊರತೆ’ ವಿಭಾಗದಲ್ಲಿ ದೂರು ದಾಖಲಿಸಬಹುದು. ಈಗಾಗಲೇ ಅಭಿವೃದ್ಧಿ ಮಾಡಿ ಬಳಕೆ ಮಾಡುತ್ತಿರುವ ಬೆಂಗಳೂರು 2.0 ಆಪ್​ನ್ನು ಏಕೀಕೃತ ಪೋರ್ಟಲ್​ಗೆ ಜೋಡಣೆ ಮಾಡಲಾಗಿದೆ.

ಪಾಲಿಕೆಯ ಏಕೀಕೃತ ಜನಸಂಪರ್ಕ ವೇದಿಕೆ ಪೋರ್ಟಲ್ ಪ್ರಾಯೋಗಿಕ ಬಳಕೆಯ ವೇಳೆ ಕೆಲವು ಸಮಸ್ಯೆ ಪತ್ತೆಯಾಗಿದ್ದು, ಸುಧಾರಿತ ಅಂಶಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಪೋರ್ಟಲ್ ಜತೆಗೆ ಆಪ್ ಅಭಿವೃದ್ಧಿ ಮಾಡುತ್ತಿದ್ದು ಎಲ್ಲ ವಿಭಾಗಗಳ ಕೊಂಡಿಯ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ನವೆಂಬರ್ ಅಂತ್ಯದೊಳಗೆ ಅಧಿಕೃತ ಚಾಲನೆ ದೊರೆಯಲಿದೆ.

| ಡಾ.ಕೆ.ವಿ. ತ್ರಿಲೋಕ್​ಚಂದ್ರ ಪಾಲಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ವಿಶೇಷ ಆಯುಕ್ತ

ಪ್ರಾಯೋಗಿಕವಾಗಿ ಬಳಕೆಗೆ ಮುಕ್ತ: ಬಿಬಿಎಂಪಿ ಅಧಿಕೃತ ವೆಬ್​ಸೈಟ್ ಅನ್ನು ಯುಸಿಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡಿ ಅ.1ರಿಂದ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಒಂದು ತಿಂಗಳು ಪ್ರಾಯೋಗಿಕ ಅವಧಿಯಾಗಿ ಬಳಕೆ ಮಾಡುತ್ತಿದ್ದು, ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಹಂಚಿಕೊಳ್ಳಲು ಪ್ರತ್ಯೇಕ ಕೊಂಡಿಯನ್ನು ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಬೆಂಗಳೂರಿನ ಎಲ್ಲ ನಾಗರಿಕ ಸೇವೆಗಳನ್ನು ಒಂದೇ ವೇದಿಕೆಯಡಿ ತಂದು, ಬೆರಳ ತುದಿಯಲ್ಲಿ ಸೇವೆ ಪಡೆಯುವಂತೆ ಮಾಡಲಾಗುವುದು. ಆಡಳಿತದಲ್ಲಿ ತಾಂತ್ರಿಕತೆ ಬಳಕೆಯಲ್ಲಿ ದೇಶದಲ್ಲಿಯೇ ಅಗ್ರಗಣ್ಯ ನಗರವಾಗಿ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಾಯೋಗಿಕ ಬಳಕೆ ಅವಧಿಯಲ್ಲಿ ವೆಬ್​ಸೈಟ್​ನಲ್ಲಿ ಎದುರಾಗುವ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಪೂರ್ಣಕಾಲಿಕ ಬಳಕೆಗೆ ನವೆಂಬರ್​ನಲ್ಲಿ ಮುಕ್ತಗೊಳಿಸುವ ಸಾಧ್ಯತೆಯಿದೆ.

ಒಂದು ಕ್ಲಿಕ್​ನಲ್ಲಿ ಹಲವು ಮಾಹಿತಿ: ಪಾಲಿಕೆಯ ಹೊಸ ಪೋರ್ಟಲ್​ನಲ್ಲಿ 800 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಬಿಬಿಎಂಪಿಯ 198 ವಾರ್ಡ್​ಗಳ ರಸ್ತೆ ಇತಿಹಾಸ, ಜಿಐಎಸ್ ಮ್ಯಾಪಿಂಗ್ ಲಭ್ಯವಿದೆ. ನಗರದ ಯಾವುದೇ ಸ್ಥಳದಲ್ಲಿ ನಿಂತು ನೌ ಯುವರ್ ವಾರ್ಡ್ ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಸ್ಥಳದ ಸಂಪೂರ್ಣ ವಿವರ ಲಭ್ಯವಾಗುತ್ತದೆ. ವಾರ್ಡ್ ಹೆಸರು, ವಿಧಾನಸಭಾ ಕ್ಷೇತ್ರ ಮತ್ತು ವಲಯ ತಿಳಿಸುತ್ತದೆ. ಹತ್ತಿರದ ಆಸ್ಪತ್ರೆ, ರಕ್ತನಿಧಿ ಕೇಂದ್ರ, ಬಸ್, ರೈಲು ನಿಲ್ದಾಣ, ಮೇಲ್ಸೇತುವೆ, ಆಂಬುಲೆನ್ಸ್, ಮಾರುಕಟ್ಟೆಗಳು, ಚಿತಾಗಾರಗಳು, ಬೆಂಗಳೂರು ಒನ್ ಕೇಂದ್ರ, ರಾತ್ರಿ ಆಶ್ರಯತಾಣಗಳು, ಕೆರೆಗಳು ಹಾಗೂ ಶಾಲೆ- ಕಾಲೇಜುಗಳ ಬಗ್ಗೆ ಮ್ಯಾಪ್ ಆಧಾರಿತ ಮಾಹಿತಿ ದೊರೆಯಲಿದೆ. ಜತೆಗೆ, ಪಾಲಿಕೆಯ ಆರೋಗ್ಯ, ಕಂದಾಯ, ಇಂಜಿನಿಯರಿಂಗ್ ಮತ್ತು ಘನತ್ಯಾಜ್ಯ ನಿರ್ವಹಣೆ ಸಂಬಂಧಿತ ಗ್ರೇಡ್ 1 ರಿಂದ ಗ್ರೇಡ್ 5ರವರೆಗೆ ಅಧಿಕಾರಿಗಳ ಮೊಬೈಲ್ ಸಂಖ್ಯೆಯೂ ಲಭ್ಯವಿದೆ.

ಯುಸಿಸಿ ಪೋರ್ಟಲ್ ಸೌಲಭ್ಯಗಳು

  • ಆಸ್ತಿ ತೆರಿಗೆ ಪಾವತಿ
  • ಉದ್ಯಮ ಸ್ಥಾಪನೆ ಪರವಾನಗಿ, ನವೀಕರಣ
  • ಕಟ್ಟಡ ನಕ್ಷೆ ಮಂಜೂರಾತಿ
  • ಶವಸಂಸ್ಕಾರಕ್ಕೆ ಚಿತಾಗಾರ ನೋಂದಣಿ
  • ಜನನ ಮತ್ತು ಮರಣ ಪ್ರಮಾಣ ಪತ್ರ
  • ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ
  • ಮಾಹಿತಿ ಹಕ್ಕು ಕಾಯ್ದೆ ಸೇವೆ
  • ಪಾಲಿಕೆಯ ಆದೇಶಗಳು
  • ಮಾರ್ಗಸೂಚಿಗಳು
  • ಹೊಸ ಯೋಜನೆಗಳು
  • ಆಯುಕ್ತರು, ಮೇಯರ್ ತಪಾಸಣೆ ವರದಿ
  • ಸಾಮಾಜಿಕ ಜಾಲತಾಣದ ಮಾಹಿತಿ

ಪೋರ್ಟಲ್ ವಿಳಾಸ: https://bbmp.gov.in/home