ಜಿಲ್ಲೆ

110 ಹಳ್ಳಿಗಳ ಬೋರ್‌ವೆಲ್ ಜಲಮಂಡಳಿಗೆ ಹಸ್ತಾಂತರಿಸಲಿರುವ ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗಳಲ್ಲಿರುವ ಕೊಳವೆ ಬಾವಿಗಳನ್ನು ಪಾಲಿಕೆ ಸುಪರ್ದಿಯಿಂದ ಜಲಮಂಡಳಿಗೆ ಹಸ್ತಾಂತರಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಲಹಂಕ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಂಗಳವಾರ ಮಾತನಾಡಿದರು.

ನಗರದಲ್ಲಿ ಜಲಮಂಡಳಿ ವತಿಯಿಂದ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಬಹುತೇಕ ಕಡೆ ಸಂಪರ್ಕ ನೀಡಲಾಗಿದೆ. ಹಾಗಾಗಿ ಪಾಲಿಕೆ ಸುಪರ್ದಿಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಬೇಕು. ಯಾವುದೇ ಸಮಸ್ಯೆ ಆದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ದೇಶಿಸಿದರು.

ಫೆಬ್ರವರಿ ಅಂತ್ಯದೊಳಗಾಗಿ ನೀರು ಒದಗಿಸಿ:

ಥಣಿಸಂದ್ರ ಹಾಗೂ ಹೆಗಡೆ ನಗರಕ್ಕೆ ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗುವುದು. ಈ ಸಂಬಂಧ ಪ್ರಕ್ರಿಯೆ ಆರಂಭಿಸಿ ಪರೀಕ್ಷೆ ಮಾಡಬೇಕು. ನೀರು ಸೋರಿಕೆ ಆಗುವುದನ್ನು ಗುರುತಿಸಿ ಫೆಬ್ರವರಿ ಅಂತ್ಯದೊಳಗೆ ಎಲ್ಲ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಸೂಚಿಲಾಗಿದೆ. ಈ ಪ್ರದೇಶಗಳಿಗೆ ವೇಳಾಪಟ್ಟಿ ಸಿದ್ದಪಡಿಸಿ ನಿಗದಿತ ಸಮಯದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.

ಒಂದು ಬಾರಿ ಸ್ವಚ್ಛತೆಗೆ ಪ್ರಸ್ತಾವನೆ:

ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಸುಮಾರು 13 ಕಿ.ಮೀ. ಉದ್ದದ ಕಚ್ಚಾ ಡ್ರೈನ್ ಬರಲಿದೆ. ಅದರಲ್ಲಿ ಒಂದು ಬಾರಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲು ಪ್ರಸ್ತಾವನೆ ಸಿದ್ದಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದರು.

ಖಾಲಿ ಸೈಟ್‌ಗಳಿಗೆ ನೋಟೀಸ್:

ಟೆಲಿಕಾಂ ಲೇಔಟ್ ಬಳಿ ಖಾಲಿ ಸೈಟ್‌ಗಳಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಯಂತ್ರಿಸಲು ಅಂತಹ ಜಾಗಗಳಿಗೆ ನೋಟೀಸ್ ನೀಡಿ ಸ್ವಚ್ಛ ಮಾಡಬೇಕು. ನಂತರ ಸಂಬಂಧಪಟ್ಟ ಮಾಲೀಕರಿಂದ ಹಣ ವಸೂಲಿ ಮಾಡಬೇಕು. ರಾಜಕಾಲುವೆಯ ಸೈಡ್ ಡ್ರೈನ್ಸ್‌ಗಳಲ್ಲಿ ಹೂಳೆತ್ತುವ ಹಾಗೂ ಜಲಮಂಡಳಿಯ ಒಳ ಚರಂಡಿಗಳಲ್ಲಿ ಕಾಲ ಕಾಲಕ್ಕೆ ಸಕ್ಕಿಂಗ್ ಮಾಡುತ್ತಿರಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.