ಜಿಲ್ಲೆ

ಹಬ್ಬದ ಬಳಿಕ ರಸ್ತೆಗುಂಡಿ ಮುಚ್ಚಲಿರುವ ಬಿಬಿಎಂಪಿ

ಬೆಂಗಳೂರು: ಇತ್ತೀಚಿನ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ಇವುಗಳನ್ನು ದುರಸ್ತಿಗೊಳಿಸಲು ಪಾಲಿಕೆ ಮುಂದಾಗಿದೆ. ದೀಪಾವಳಿ ಹಬ್ಬ ಮುಗಿದ ಬಳಿಕ ಆದ್ಯತೆ ಮೇರೆಗೆ ರಸ್ತೆಗುಂಡಿ ಮುಚ್ಚಲು ವಲಯವಾರು ಅಭಿಯಾನ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.

ಕಳೆದ ವಾರ ಹಿಂಗಾರು ವರ್ಷಧಾರೆ ಭಾರಿ ಪ್ರಮಾಣದಲ್ಲಿ ಸುರಿದಿತ್ತು. ಇದರಿಂದಾಗಿ ಹಲವೆಡೆ ಪ್ರವಾಹ ಉಂಟಾಗಿ ರಸ್ತೆಗಳು ಹಾಳಾಗಿವೆ. ಪ್ರಮುಖ ರಸ್ತೆಗಳಲ್ಲೇ ಗುಂಡಿಗಳು ಉಂಟಾಗಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಸತತ ಮಳೆಯಿಂದ ಗುಂಡಿಮುಚ್ಚಲು ಸಾಧ್ಯವಾಗಿರಲಿಲ್ಲ. ಹಬ್ಬಕ್ಕೂ ಮುನ್ನ 2 ದಿನ ಕೆಲ ರಸ್ತೆಗಳಲ್ಲಿ ಮಾತ್ರ ವೆಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚುವ ಯತ್ನ ನಡೆದಿದ್ದರೂ, ಹೆಚ್ಚಿನ ಕಡೆ ಸಾಧ್ಯವಾಗಿರಲಿಲ್ಲ.

ದೀಪಾವಳಿ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚಲು ವಯಲವಾರು ಅಭಿಯಾನ ಕೈಗೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ. ಎರಡು ತಿಂಗಳ ಹಿಂದೆ ಇದೇ ರೀತಿ ರಸ್ತೆ ಗುಂಡಿಗಳು ಉಂಟಾಗಿದ್ದ ವೇಳೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ ವಲಯಗಳ ಹಿರಿಯ ಅಧಿಕಾರಿಗಳು ದುರಸ್ತಿ ಕಾರ್ಯದ ಉಸ್ತುವಾರಿ ವಹಿಸಿ ಕಾಲಮಿತಿಯೊಳಗೆ ಗುಂಡಿ ಮುಚ್ಚಲು ಕಟ್ಟಪ್ಪಣೆ ಮಾಡಿದ್ದರು. ಇದಾಗಿ ತಿಂಗಳೊಳಗೆ 14 ಸಾವಿರ ಗುಂಡಿಗಳನ್ನು ಮುಚ್ಚಿದ್ದರಿಂದ ರಸ್ತೆಗಳು ಒಂದಿಷ್ಟು ಸುಧಾರಿಸಿದ್ದವು. ಮತ್ತೆ ಭಾರಿ ಮಳೆ ಉಂಟಾಗಿ ಗುಂಡಿಗಳು ಸೃಷ್ಟಿಯಾಗಿರುವುದರಿಂದ ಎರಡನೇ ಬಾರಿ ಅಭಿಯಾನ ಕೈಗೊಳ್ಳಲಾಗುತ್ತಿದೆ.

ಕಾರ್ಮಿಕರ ಕೊರತೆ:

ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದರೂ, ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ದೀಪಾವಳಿ ಹಬ್ಬದ ನಿಮಿತ್ತ ಹೆಚ್ಚಿನ ಕಾರ್ಮಿಕರು ತವರಿಗೆ ತೆರಳಿದ್ದಾರೆ. ಜತೆಗೆ ಗುತ್ತಿಗೆದಾರರು ಕೂಡ ಕಾರ್ಮಿಕರಿಗೆ ರಜೆ ನೀಡಿರುವುದರಿಂದ ಮತ್ತೆ ಕಾರ್ಮಿಕರು ಕೆಲಸಕ್ಕೆ ವಾಪಸಾಗುವುದು ನಿಧಾನ ಆಗಲಿದೆ. ಇದರಿಂದ ಕೆಲ ದಿನಗಳ ಬಳಿಕವಷ್ಟೇ ದುರಸ್ತಿ ಕಾರ್ಯಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ.

ಕ್ಷೇತ್ರವಾರು ಟೆಂಡರ್ ಆಹ್ವಾನ:

ರಸ್ತೆಗುಂಡಿ ಮುಚ್ಚಲು ಪಾಲಿಕೆ ಪ್ರತ್ಯೇಕ ಅನುದಾನವನ್ನು ಮೀಸಲಿರಿಸಿದೆ. ಈಗಾಗಲೇ ಒಂದು ಇಡೀ ನಗರದೆಲ್ಲೆಡೆ ಗುಂಡಿಗಳ ದುರಸ್ತಿಗೆ 10 ಕೋಟಿ ರೂ.ಗೂ ಹೆಚ್ಚು ಹಣ ವೆಚ್ಚ ಮಾಡಿದೆ. ಜತೆಗೆ ಮೂಲಸೌಕರ್ಯ ವಿಭಾಗವು ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳ ದುರಸ್ತಿಗೆ ಒಂದಿಷ್ಟು ಹಣವನ್ನು ಖರ್ಚು ಮಾಡಿದೆ. ಈಗ ಎರಡನೇ ಬಾರಿ ನಗರದಲ್ಲಿ ಉಂಟಾಗಿರುವ ರಸ್ತೆಗುಂಡಿ ಮುಚ್ಚಲು ಹಣದ ಕೊರತೆ ಇಲ್ಲವೆಂದು ಪಾಲಿಕೆ ಮುಖ್ಯ ಆಯುಕ್ತರು ಹೇಳಿದ್ದಾರೆ.

ಈ ಬಾರಿ ಗುಂಡಿ ಮುಚ್ಚಲು ವಿಧಾನಸಭಾ ಕ್ಷೇತ್ರವಾರು ಟೆಂಡರ್ ಆಹ್ವಾನಿಸಲಾಗುತ್ತಿದೆ. ಕಳೆದ ವಾರ ಗೋವಿಂದರಾಜನಗರದ ವಿವಿಧ ವಾರ್ಡ್‌ಗಳಿಗೆ 5 ಕೋಟಿ ರೂ. ಗೂ ಹೆಚ್ಚು ಮೊತ್ತದ ಟೆಂಡರ್ ಆಹ್ವಾನಿಸಿದ್ದು, ವಾರದ ಬಳಿಕ ಅಂತಿಮಗೊಳಿಸಲಾಗುತ್ತದೆ ಆ ಬಳಿಕ ಅಧಿಕೃತ ಕಾಮಗಾರಿ ಆರಂಭವಾಗಲಿದೆ. ಹಂತ ಹಂತವಾಗಿ ಹೆಚ್ಚು ಗುಂಡಿಗಳು ಉಂಟಾಗಿರುವ ಕ್ಷೇತ್ರಗಳಲ್ಲೂ ಟೆಂಡರ್ ಆಹ್ವಾನಿಸಲು ಅಧಿಕಾರಿಗಳು ಮುಂದಾಗಿದ್ದಾರೆ.