ಜಿಲ್ಲೆ

ಅನಧಿಕೃತ ಫ್ಲೆಕ್ಸ್ ವಿರುದ್ಧ ಪಾಲಿಕೆ ಕಾರ್ಯಾಚರಣೆ

ಆರ್.ತುಳಸಿಕುಮಾರ್

ಬೆಂಗಳೂರು: ನಗರದಲ್ಲಿ ಅನುಮತಿ ಇಲ್ಲದೆ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಬಿಬಿಎಂಪಿ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ತಪ್ಪು ಮಾಡುವವರ ಮೇಲೆ ಎಫ್​ಐಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕಳೆದ ವರ್ಷದಿಂದೀಚಿಗೆ ನಗರದಲ್ಲಿ ಅನುಮತಿ ಇಲ್ಲದೆ ಬ್ಯಾನರ್, ಫ್ಲೆಕ್ಸ್ ಅಥವಾ ಇನ್ನಿತರ ಜಾಹೀರಾತು ಲಕಗಳನ್ನು ಅಳವಡಿಸದಂತೆ ನಿಯಮ ರೂಪಿಸಲಾಗಿದೆ. ಇದಕ್ಕೆ ಅನುಮೋದನೆ ನೀಡಿರುವಂತೆ ಹೈಕೋರ್ಟ್ ಕೂಡ ನಗರ ಸೌಂದರ್ಯ ಹಾಳುಗೆಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಗಾಗ್ಗೆ ಕಾರ್ಯಾಚರಣೆ ಮಾಡುತ್ತಿದ್ದರೂ, ಇತ್ತೀಚಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಫ್ಲೆಕ್ಸ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಮತದಾನ ಪೂರ್ಣಗೊಂಡಿದ್ದು, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ, ಸಿಬ್ಬಂದಿಯನ್ನು ಅವರ ಮಾತೃ ಇಲಾಖೆಗಳಲ್ಲೇ ಕೆಲಸ ಮಾಡಲು ಸೂಚಿಸಲಾಗಿದೆ. ಇದರಿಂದಾಗಿ ಪಾಲಿಕೆಯ ಜಾಹೀರಾತು ವಿಭಾಗ ಸೇರಿ ಇದಕ್ಕೆ ಪೂರಕವಾಗಿ ಕೆಲಸ ಮಾಡುವ ವಿಭಾಗಗಳಿಂದ ಅನಧಿಕೃತ ಫ್ಲೆಕ್ಸ್ ಹಾಕುವವರ ವಿರುದ್ಧ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಮುಖ್ಯ ಆಯುಕ್ತರು ಕಟ್ಟಪ್ಪಣೆ ಮಾಡಿದ್ದಾರೆ.

ಮುಖಂಡನ ವಿರುದ್ಧ ಎಫ್​​ಐಆರ್:

ಪದ್ಮನಾಭನಗರದ ಬನಶಂಕರಿ 2ನೇ ಹಂತ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತದ ಬಳಿಯಿರುವ ಎಂ.ಕೆ. ಪುಟ್ಟಲಿಂಗಯ್ಯ ರಸ್ತೆಯ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಸ್ವತ್ತಿಗೆ ಕಾರ್ತಿಕ್ ವೆಂಕಟೇಶಮೂರ್ತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂಬ ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸಲಾಗಿತ್ತು. ಇದನ್ನು ಗಮನಿಸಿ ಪಾಲಿಕೆಯ ಪ್ಲೈಯಿಂಗ್ ಸ್ಕ್ವಾಡ್ ತಂಡದವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿ ಎಫ್​​ಐಆರ್ ದಾಖಲಿಸಿದ್ದಾರೆ.

ಅಕ್ರಮ ಮತ್ತು ಅನಧಿಕೃತ ಬ್ಯಾನರ್‌ಗಳು ಆಸ್ತಿ ವಿರೂಪ ಕಾಯ್ದೆ ಮತ್ತು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಬ್ಯಾನರ್ ಹಾಗೂ ಪ್ರದರ್ಶನಗಳ ಬಗ್ಗೆ ದೂರುಗಳನ್ನು ಸ್ಥಳ ಮತ್ತು ಚಿತ್ರದ ಸಮೇತ ಪಾಲಿಕೆಯ ವ್ಯಾಟ್ಸ್ ಅಪ್ ನಂಬರ್ 94806 85700 ಗೆ ಕಳುಹಿಸಿದರೆ ಅಂತಹವುಗಳ ವಿರುದ್ಧ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ನಾಗರಿಕರಲ್ಲಿ ಮನವಿ ಮಾಡಿದೆ.