ಜಿಲ್ಲೆ

ಬಿಬಿಎಂಪಿ: ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕು

ಆರ್.ತುಳಸಿಕುಮಾರ್

ಬೆಂಗಳೂರು: ನಗರದ ವಿವಿಧೆಡೆ ಉಂಟಾಗಿರುವ ರಸ್ತೆ ಗುಂಡಿ ಕುರಿತು ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ಕೇಳಿಬಂದ ಬೆನ್ನಲ್ಲೇ, ಬಿಬಿಎಂಪಿಯ ಎಂಟೂ ವಲಯಗಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಪಾಲಿಕೆ ಇಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿದೆ.

ಈ ತಿಂಗಳ ಮಧ್ಯ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಗುಂಡಿಗಳ ಸಂಖ್ಯೆ ಹೆಚ್ಚಾಗಿತ್ತು. ಸತತ ಮಳೆಯಿಂದ ದುರಸ್ತಿ ಕೈಗೊಳ್ಳಲು ಹಿಂದೇಟು ಹಾಕಿದ್ದರಿಂದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಕಷ್ಟವಾಗಿತ್ತು. ಇದಕ್ಕೆ ಸವಾರರು ಪಾಲಿಕೆ ವಿರುದ್ಧ ಹರಿಹಾಯ್ದು, ಗುಂಡಿಗಳನ್ನು ಮುಚ್ಚಿ ಸರಾಗ ಸಂಚಾರಕ್ಕೆ ಅವಕಾಶ ಮಾಡಲು ಆಗ್ರಹಿಸಿದ್ದರು. ಜತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿದೇರ್ಶಿಸಿ ತ್ವರಿತವಾಗಿ ರಸ್ತೆ ದುರಸ್ತಿ ಕಾರ್ಯ ಆರಂಭಿಸುವಂತೆ ತಾಕೀತು ಮಾಡಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಕಳೆದ ವಾರ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಹಿರಿಯ ಅಧಿಕಾರಿಗಳು ಹಾಗೂ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು. ಎಲ್ಲ ವಲಯಗಳಲ್ಲೂ ಏಕ ಕಾಲದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ವಲಯವಾರು ಗುಂಡಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚಲು ನಿರ್ದೇಶಿಸಿದ್ದರು. ಜತೆಗೆ ಮಳೆ ಬಂದಲ್ಲಿ ಕೋಲ್ಡ್ ಮಿಕ್ಸ್ ಬಳಸಿ ರಸ್ತೆಗುಂಡಿ ಮುಚ್ಚಲು ಸೂಚಿಸಿದ್ದರು.

4,600ಕ್ಕೂ ಹೆಚ್ಚು ಗುಂಡಿ ಗುರುತು:

ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬುದನ್ನು ಟ್ರಾಫಿಕ್ ಪೊಲೀಸರು ಪಾಲಿಕೆ ಗಮನಕ್ಕೆ ತಂದಿತ್ತು. ಜತೆಗೆ ವಿವಿಧ ರಸ್ತೆಗಳಲ್ಲಿ 4,614 ಗುಂಡಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚುವಂತೆ ಪಾಲಿಕೆಗೆ ಪಟ್ಟಿ ನೀಡಲಾಗಿತ್ತು. ಈ ಪೈಕಿ 3,995 ಪಾಲಿಕೆ ಹಾಗೂ 619 ಬಿಬಿಎಂಪಿಯ ಹೊರಭಾಗದಲ್ಲಿ ಗುಂಡಿಗಳಿರುವುದಾಗಿ ಪತ್ತೆ ಮಾಡಲಾಗಿತ್ತು. ಇವುಗಳ ಪೈಕಿ ಬಿಬಿಎಂಪಿ ತನ್ನ ವ್ಯಾಪ್ತಿಯ 3,287 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಉಳಿದವುಗಳನ್ನು ಜಲಮಂಡಳಿ, ಬೆಸ್ಕಾಂ, ಮೆಟ್ರೋ, ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಅವುಗಳನ್ನು ಕಾಲಮಿತಿಯೊಳಗೆ ದುರಸ್ತಿ ಮಾಡುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ರಜಾ ದಿನದಲ್ಲೂ ಶೀಘ್ರ ಕೆಲಸ:

ಪಾಲಿಕೆಯ ಎಲ್ಲ 8 ವಲಯಗಳಲ್ಲಿಯೂ ರಜಾ ದಿನವಾದ ಶನಿವಾರ ಹಾಗೂ ಭಾನುವಾರ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ದುರಸ್ತಿ ಸ್ಥಳದಲ್ಲಿ ಆಯಾ ಭಾಗದ ಇಂಜಿನಿಯರ್‌ಗಳು ಹಾಗೂ ಉಸ್ತುವಾರಿ ಅಧಿಕಾರಿಗಳು ಹಾಜರಿದ್ದು ನಿಗಾ ವಹಿಸಿದ್ದಾರೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ರಾತ್ರಿ ವೇಳೆ ಗುಂಡಿ ಮುಚ್ಚುವ ಕಾರ್ಯ:

ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗದಿಂದ ಹೊರ ವರ್ತುಲ ರಸ್ತೆ, ಹೈಡೆನ್ಸಿಟಿ ಕಾರಿಡಾರ್ ಹಾಗೂ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅದರಂತೆ ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ, ಕನಕಪುರ ರಸ್ತೆ, ನಾಗರಭಾವಿ ಸೇರಿ ಇನ್ನಿತರ ರಸ್ತೆಗಳಲ್ಲಿ ಶನಿವಾರ ಹಾಗೂ ಭಾನುವಾರ ಗುಂಡಿಗಳನ್ನು ಮುಚ್ಚಲಾಗಿದೆ.