ಬೆಂಗಳೂರು: ಮಹಾನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಹೊರವಲಯದಲ್ಲಿ ಸೂಕ್ತ ಜಾಗಕ್ಕಾಗಿ ಹುಡುಕಾಟದಲ್ಲಿ ಬಿಬಿಎಂಪಿ ತೊಡಗಿದೆ.
ಇತ್ತೀಚಿಗಷ್ಟೇ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಸಂಗ್ರಹಿಸಿ ಅವುಗಳನ್ನು ಸಂಸ್ಕರಣಾ ಘಟಕಗಳಿಗೆ ಸಾಗಿಸಲು ಬೃಹತ್ ಮೊತ್ತದ ಟೆಂಡರ್ ಆಹ್ವಾನಿಸಿದೆ. ಜತೆಗೆ ನಗರದ ವಿಧಾನಸಭಾ ಕ್ಷೇತ್ರವಾರು ಒಟ್ಟು 33 ಪ್ಯಾಕೇಜ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಟೆಂಡರ್‌ಅನ್ನು ಪ್ರತ್ಯೇಕವಾಗಿ ಕರೆದಿದೆ. ಈ ಎರಡೂ ಟೆಂಡರ್‌ಗಳ ಮೂಲಕ ಸಂಗ್ರಹಿಸುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಬೃಹತ್ ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ.
ನಗರದ ಹೊರವಲಯದಲ್ಲಿ ಸ್ಥಾಪನೆಯಾಗಲಿರುವ ಈ ಘಟಕಕ್ಕೆ ಬೇಕಾಗುವ ಜಾಗವು ಪಾಲಿಕೆ ಬಳಿ ಇಲ್ಲ. ಹಾಗಾಗಿ ಸರ್ಕಾರಿ ಜಾಗದ ಜತೆಗೆ ಖಾಸಗಿ ಜಮೀನು ಪಡೆಯಲು ಮುಂದಾಗಿದೆ. ಘಟಕ ಸ್ಥಾಪಿಸುವ ಸ್ಥಳದಲ್ಲಿ ಸರ್ಕಾರಿ ಜಮೀನು ಲಭ್ಯವಾಗದಿದ್ದಲ್ಲಿ ಕಾಸಗಿಯವರಿಂದ ಪಡೆಯಲಾಗುತ್ತಿದ್ದು, ಇದಕ್ಕಾಗಿ 100 ಎಕರೆ ಜಾಗಕ್ಕಾಗಿ ತಲಾಶ್ ಮಾಡಲಾಗುತ್ತಿದೆ. ಈ ಜಾಗವನ್ನು ಗುತ್ತಿಗೆ ಅಡಿ ಪಡೆಯಲಾಗುತ್ತದೆಯೆ ಅಥವಾ ಖರೀದಿಸಲಾಗುತ್ತದೆಮೆ ಎಂಬುದನ್ನು ನಿಗಮವು ಸ್ಪಷ್ಟಪಡಿಸಿಲ್ಲ.
ಕಳೆದ ವರ್ಷ ಸರ್ಕಾರ ನಗರದ ಹೊರವಲಯದಲ್ಲಿ ನಾಲ್ಕು ಕಡೆ ಸಂಸ್ಕಾರಣಾ ಘಟಕಗಳನ್ನು ಸ್ಥಾಪಿಸಲು 100-150 ಎಕರೆ ಜಮೀನು ಗುರುತಿಸಿ ಪಾಲಿಕೆಗೆ ಹಸ್ತಾಂತರಿಸುವುದಾಗಿ ಹೇಳಿತ್ತು. ಇದಕ್ಕಾಗಿ ಡಿಸಿಎಂ ನೇತೃತ್ವದಲ್ಲಿ 3-4 ಜಾಗಗಳನ್ನು ಗುರುತಿಸಿದ್ದರೂ, ಅವುಗಳಿನ್ನೂ ಪಾಲಿಕೆಗೆ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರ ಆಗಿಲ್ಲ. ಉದ್ದೇಶಿತ ಜಾಗಗಳಲ್ಲಿ ಒಟ್ಟು 7 ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಸಂಸ್ಕರಿಸಲು ನಿಗಮ ಸಿದ್ಧತೆ ನಡೆಸಿದೆ.