ಜಿಲ್ಲೆ

ಆಹಾರ ನೆರವಿಗೆ ಸಹಾಯ ಸೇತುವೆ ಆ್ಯಪ್ ಅಭಿವೃದ್ಧಿ ಪಡಿಸಿದೆ ಬಿಬಿಎಂಪಿ- ಇದು ಹೇಗೆ ಕೆಲಸ ಮಾಡುತ್ತೆ ಎಂಬ ವಿವರ ಇಲ್ಲಿದೆ..

ಬೆಂಗಳೂರು: ಲಾಕ್​ಡೌನ್ ವೇಳೆ ಮಹಾನಗರದಲ್ಲಿ ನೂರಾರು ಸ್ವಯಂ ಸೇವಾ ಸಂಸ್ಥೆಗಳು ವಿತರಿಸುವ ಆಹಾರ, ದಿನಸಿ ಕಿಟ್ ಹಾಗೂ ಔಷಧಗಳನ್ನು ಅರ್ಹರು ಅಗತ್ಯವಿರುವವರಿಗೆ ತಲುಪಿಸಲು ‘ಸಹಾಯ ಸೇತುವೆ’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಕಂದಾಯ ಸಚಿವ ಆರ್. ಅಶೋಕ ಚಾಲನೆ ‘ಸಹಾಯ ಸೇತುವೆ ಆ್ಯಪ್’ ಬಿಡುಗಡೆ ಮಾಡಿದರು. ನಗರದಲ್ಲಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯ ನಾಗರಿಕರು ಹಾಗೂ ವಿವಿಧ ನೋಂದಾಯಿತ ಸಂಘ ಸಂಸ್ಥೆಗಳು ಲಾಕ್​ಡೌನ್ ವೇಳೆ ನೀಡುತ್ತಿರುವ ನೆರವನ್ನು ಅರ್ಹರಿಗೆ ತಲುಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಆ್ಯಪ್ ಆರಂಭಿಸಲಾಗಿದೆ ಎಂದರು.

ಕೆಲವರಿಗಷ್ಟೆ ಸೌಲಭ್ಯ ಸಿಗುತ್ತಿವೆ: ನಗರದಲ್ಲಿ ಲಕ್ಷಾಂತರ ಜನ ಸಂಕಷ್ಟದಲ್ಲಿದ್ದು, ಕೆಲವರಿಗಷ್ಟೇ ಸರ್ಕಾರ ಮತ್ತು ಸಂಘ ಸಂಸ್ಥೆಗಳ ನೆರವು ಸಿಗುತ್ತಿವೆ. ಇನ್ನು ಕೆಲವರು ನೆರವಿನಿಂದ ಹೊರಗುಳಿದಿದ್ದಾರೆ. ಹೀಗಾಗಿ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಕೆಲವು ಪ್ರದೇಶಗಳಲ್ಲಿ ಬಡವರು, ಕೂಲಿಕಾರ್ವಿುಕರನ್ನು ಗುರುತಿಸಲಾಗಿದ್ದು, ಸಹಾಯ ಸೇತುವೆ ಆಪ್​ಗೆ ಮಾಹಿತಿ ಅಪ್​ಲೋಡ್ ಮಾಡಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳು ಆ್ಯಪ್ ಆಧಾರದ ಮೆಲೆ ನೆರವು ನೀಡಬಹುದಾಗಿದೆ. ಇದರಿಂದ ಅಸಮತೋಲನ ಹಂಚಿಕೆ ನಿವಾರಣೆಯಾಗಲಿದೆ ಎಂದು ಹೇಳಿದರು.

ಮೇಯರ್ ಗೌತಮ್ ಕುಮಾರ್, ಉಪ ಮೇಯರ್ ರಾಮಮೋಹನ್ ರಾಜು, ಸಂಸದ ತೇಜಸ್ವಿಸೂರ್ಯ, ಆಯುಕ್ತ ಬಿ.ಎಚ್. ಅನಿಲ್​ಕುಮಾರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.

ಆ್ಯಪ್ ಬಳಕೆ ಹೇಗೆ?: ಬಿಬಿಎಂಪಿ ಹಾಗೂ ಇನ್ಪೋಸಿಸ್ ಕಂಪನಿ ಅಭಿವೃದ್ಧಿ ಪಡಿಸಿರುವ ಈ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಲು ಲಿಂಕ್ ಲಭ್ಯವಿದೆ. ಈ ಲಿಂಕ್ ಒತ್ತಿದಾಕ್ಷಣ ಗೂಗಲ್ ಪ್ಲೇ ಸ್ಟೋರ್​ನಿಂದ 30 ಎಂಬಿ ಆಪ್ ಡೌನ್​ಲೋಡ್ ಆಗುತ್ತದೆ. ಅದರಲ್ಲಿ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ದಾಖಲಿಸಿ ನೋಂದಣಿ ಮಾಡಬಹುದಾಗಿದೆ. ಈ ಆಪ್ ಮೂಲಕ ವೈದ್ಯರು, ನರ್ಸ್​ಗಳು, ಅರೆವೈದ್ಯಕೀಯ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ವಾಹನ ಚಾಲಕರು, ಸ್ವಯಂ ಸೇವಾ ಸಂಸ್ಥೆಗಳು, ಇತರೆ ಸಾರ್ವಜನಿಕರು ನೆರವು ನೀಡಬಹುದಾಗಿದೆ.

ಆ್ಯಪ್ ಕಾರ್ಯಗಳು

ಮೊದಲನೇ ಹಂತ- ದೇಣಿಗೆ: ಸಹಾಯ ಸೇತುವೆ ಆಪ್ ಮೂಲಕ ನಾಗರಿಕರು, ಸಂಘ ಸಂಸ್ಥೆಗಳು ದೇಣಿಗೆ ನೀಡಬಹುದು. ಬಿಬಿಎಂಪಿ ಸಂಗ್ರಹ ಕೇಂದ್ರಗಳಿಗೆ ಸಾಮಗ್ರಿ ತಲುಪಿಸಲು ಅರ್ಹ ಪಾಸ್ ವಿತರಣೆ ಹಾಗೂ ದಾನಿಗಳು ನೀಡಿದ ವಸ್ತುಗಳಿಗೆ ಸ್ವೀಕೃತಿ ರಸೀದಿ ನೀಡಲಾಗುತ್ತದೆ.

2ನೇ ಹಂತ- ವೈಯಕ್ತಿಕ ಸ್ವಯಂ ಸೇವೆ: ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಇಚ್ಛಿಸುವ ವೈದ್ಯರು, ನರ್ಸ್​ಗಳು, ಉದ್ಯಮಿಗಳು ಹಾಗೂ ಯುವಕರು ತಮ್ಮ ಸಂಪೂರ್ಣ ವಿವತ ದಾಖಲಿಸಬೇಕು. ನಂತರ ಬಿಬಿಎಂಪಿ ಸೂಚಿಸುವ ಹತ್ತಿರದ ನಾಗರಿಕರಿಗೆ ನೆರವು ನೀಡಬಹುದು.

3ನೇ ಹಂತ- ಬಿಬಿಎಂಪಿ ಸೌಲಭ್ಯ: ಹತ್ತಿರದ ಇಂದಿರಾ ಕ್ಯಾಂಟೀನ್, ಫೀವರ್ ಕ್ಲಿನಿಕ್​ಗಳ ವಿಳಾಸ ಹಾಗೂ ಕರೊನಾ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಸಂಘಸಂಸ್ಥೆಗಳ ವಿವರ ತಿಳಿದುಕೊಳ್ಳಲು ಆಪ್ ನೆರವಾಗುತ್ತದೆ.

ಡೌನ್​ಲೋಡ್ ಲಿಂಕ್- https://play.google.com/store/apps/details?id=in.bbmpgov.covid.er 8 ವಲಯಕ್ಕೂ ಹೋಂ ಡೆಲಿವರಿ ಸಹಾಯವಾಣಿ ಇನ್ನೆರಡು ದಿನಗಳಲ್ಲಿ ಸೇವೆ ಆರಂಭ: ಲಾಕ್​ಡೌನ್ ವಿಸ್ತರಣೆಯಾದ ಹಿನ್ನೆಲೆಯಲ್ಲಿ ‘ಹೋಂ ಡೆಲಿವರಿ ಸಹಾಯವಾಣಿ’ ಸೇವೆಯನ್ನು ಬಿಬಿಎಂಪಿಯ 8 ವಲಯಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ಜನರು ಮನೆಯಿಂದ ಹೊರಬರುವುದನ್ನು ತಡೆಗಟ್ಟಲು 2 ದಿನಗಳಲ್ಲಿ ಹೋಂ ಡೆಲಿವರಿ ಆರಂಭಿಸಲಾಗುವುದು. ಎಲ್ಲರೂ ಮನೆಯಲ್ಲಿದ್ದು ಸೋಂಕು ಮುಕ್ತವಾಗಿದ್ದರೆ ರಾಜ್ಯದಿಂದ ಕರೊನಾ ಓಡಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಸೀಲ್​ಡೌನ್ ಪ್ರದೇಶದಲ್ಲಿ ಅವಶ್ಯಕತೆ ಇದ್ದ ಬಡವರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಆಹಾರ, ದಿನಸಿ, ಔಷಧ ಪೂರೈಸಲಾಗುವುದು. ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ. ಲಾಕ್​ಡೌನ್ ಮತ್ತು ಸೀಲ್​ಡೌನ್ ನಿಯಮಗಳನ್ನು ಮೀರಿ ಕೆಲವರು ಅನಗತ್ಯ ಸಂಚಾರ ಮಾಡುತ್ತಿದ್ದು, ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದರು.