ಬೆಂಗಳೂರು: ಮಹಾನಗರದಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ಮುಚ್ಚಲು ಅನುಕೂಲವಾಗುವಂತೆ ನಾಗರಿಕರಿಂದ ಮಾಹಿತಿ ಪಡೆದ ಸ್ಥಳಗಳಲ್ಲಿನ ಚಿತ್ರ ಆಧರಿಸಿ ಗುಂಡಿಗಳನ್ನು ನಿರ್ವಹಿಸಲು ಶೀಘ್ರವೇ ಆ್ಯಪ್ ಒಂದನ್ನು ಬಿಡುಗಡೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಪ್ರಸ್ತುತ ಕೋರ್ ಏರಿಯಾದಿಂದ ಆಚೆಗಿರುವ ಪ್ರದೇಶಗಳಲ್ಲಿ ಹೆಚ್ಚಿನ ರಸ್ತೆಗುಂಡಿಗಳು ಉಂಟಾಗಿವೆ. ಇಲ್ಲಿ ರಸ್ತೆಗಳು ಕಿರಿದಾಗಿರುವ ಕಾರಣ ವಾಹನ ಸಂಚಾರ ಸಮಸ್ಯೆಯಾಗುತ್ತಿದೆ. ಇಲ್ಲಿನ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಪಾಲಿಕೆ ಈಗಾಗಲೇ ಕ್ರಮ ಕೈಗೊಂಡಿದ್ದರೂ, ಹಾಲಿ ಗುಂಡಿಗಳಿಂದಾಗಿ ಜನತೆ ಸಿಟ್ಟಾಗಿದ್ದಾರೆ. ಇಂತಹ ಸ್ಥಳಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಜಿಪಿಎಸ್ ನಕ್ಷೆ ಒಳಗೊಂಡ ಮಾಹಿತಿಯನ್ನು ನೂತನ ಆ್ಯಪ್‌ಗೆ ನಾಗರಿಕರು ಅಪ್‌ಲೋಡ್ ಮಾಡಬಹುದಾಗಿದೆ. ಇವುಗಳನ್ನು ಸಂಬಂಧಿಸಿದ ವಿಭಾಗದ ಇಂಜಿನಿಯರ್‌ಗಳು ವಿಶ್ಲೇಷಿಸಿ 24 ಅಥವಾ 48 ಗಂಟೆಯೊಳಗೆ ರಸ್ತೆಗುಂಡಿ ಮುಚ್ಚುವ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ 2017ರಲ್ಲಿ ಪಾಲಿಕೆ ‘ಫಿಕ್ಸ್ ಮೈ ಸ್ಟ್ರೀಟ್’ ಹೆಸರಿನಲ್ಲಿ ಆ್ಯಪ್ ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡಿತ್ತು. ಇದು ಕೆಲ ತಿಂಗಳುಗಳ ಕಾಲ ಕೆಲಸ ಮಾಡಿದ ಬಳಿಕ ರಸ್ತೆಗುಂಡಿಗಳು ಕಡಿಮೆಯಾದವು ಎಂಬ ಕಾರಣ ನೀಡಿ ಆ್ಯಪ್ ಬಳಕೆ ಸ್ಥಗಿತಗೊಳಿಸಲಾಯಿತು. ನಂತರದ ಒಂದೆರಡು ವರ್ಷದಲ್ಲಿ ಮರುಬಳಕೆಯಾದರೂ ಸಮರ್ಪಕವಾಗಿ ಕೆಲಸ ನಿರ್ವಹಿಸಲಿಲ್ಲ. ಈಗ ಸುಧಾರಿತ ಮಾದರಿಯಲ್ಲಿ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಜೂನ್ 6ರ ಬಳಿಕ ಜನಬಳಕೆಗೆ ಸಿಗಲಿದೆ. ಹೆಚ್ಚು ಮಂದಿ ಫೋಟೋ ಸಹಿತ ಮಾಹಿತಿ ಅಪ್‌ಲೋಡ್ ಮಾಡಿದರೂ ಸಮಸ್ಯೆಯಾಗದಂತೆ ರೂಪಿಸಲಾಗಿದೆ. ಇದರಿಂದ ಕಾಲಮಿತಿಯೊಳಗೆ ಗುಂಡಿ ಮುಚ್ಚಲು ಅವಕಾಶ ಉಂಟಾಗುತ್ತದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಪುಣೆಯಿಂದ ಬರಲಿದೆ ಹೊಸ ಯಂತ್ರ ?
ಆ್ಯಪ್ ಬಳಸಿಕೊಂಡು ರಸ್ತೆಗುಂಡಿ ಮುಚ್ಚುವ ಉಪಕ್ರಮದ ಜತೆಗೆ ಹೊಸ ಮಾದರಿಯಲ್ಲಿ ಗುಂಡಿಗಳನ್ನು ನಿರ್ವಹಿಸುವ ಯಂತ್ರವೊಂದನ್ನು ಪುಣೆಯಿಂದ ತರಿಸಿಕೊಳ್ಳಲು ಪಾಲಿಕೆ ಮುಂದಾಗಿದೆ. ಈ ಯಂತ್ರವು 15-20 ನಿಮಿಷದಲ್ಲಿ ಗುಂಡಿಯನ್ನು ಸ್ವಚ್ಚಗೊಳಿಸಿ ಡಾಂಬರು ಇಲ್ಲವೇ ಕಾಂಕ್ರೀಟ್ ಮಿಕ್ಸ್‌ನಿಂದ ಮುಚ್ಚಬಹುದಾಗಿದೆ. ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ದೊಡ್ಡ ಗುಂಡಿಗಳನ್ನು ಮುಚ್ಚಲು ಈ ಯಂತ್ರವನ್ನು ಬಳಸಿಕೊಳ್ಳಲು ಪಾಲಿಕೆ ಚಿಂತನೆ ನಡೆಸಿದೆ.