ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೆ ನಿಯಂತ್ರಣಕ್ಕೆ ಈಗಾಗಲೇ ವಿವಿಧ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ನಿಗಾ ಇರಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.
ರಾಷ್ಟ್ರೀಯ ಡೆಂಘೆ ದಿನ ನಿಮಿತ್ತ ಗುರುವಾರ ಪೂರ್ವ ವಲಯದ ರಾಮಸ್ವಾಮಿಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡೆಂಘೆ ಪ್ರಕರಣಗಳನ್ನು ನಿಯಂತ್ರಿಸಲು ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದರು.
ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ಚಾಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿದ್ಧಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬೀಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿ ಇನ್ನಿತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಲಾರ್ವಾ ಸಮೀಕ್ಷೆ ಪ್ರಾರಂಭ:
ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೆ ಹರಡುತ್ತದೆ. ಆ ಸೊಳ್ಳೆಗಳು ತೆರೆದಿಟ್ಟ ನೀರಿನ ತೊಟ್ಟಿಗಳು, ಏರ್ ಕೂಲರ್‌ಗಳು, ಹೂವಿನ ಕುಂಡದ ತಟ್ಟೆಗಳು, ಸೀಮೆಂಟ್ ತೊಟ್ಟಿ, ತೆಂಗಿನ ಚಿಪ್ಪು, ಒಡೆದ ಟೈರ್‌ಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಸಂಬಂಧ ಪ್ರಾರಂಭಿಕ ಹಂತದಲ್ಲೇ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು ಗುರಿತಿಸಿ ನಾಶಪಡಿಸಲಾಗುತ್ತದೆ.
ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್‌ಗೆ 4 ಔಷಧಿ ಸಿಂಪಡಿಸುವ ತಂಡಗಳನ್ನು ನಿಯೋಜಿಸಲಾಗಿದೆ. ಸ್ಲಂ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ/ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಮನೆ-ಮನೆ ಭೇಟಿ ನೀಡಿ ಡೆಂಘೆ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಸುರಳ್ಕರ್ ವಿವರಿಸಿದರು.
ಜಾಥಾದಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ. ಮದನಿ, ಪೂರ್ವ ವಲಯ ಆರೊಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮಿ, ಡೆಂ ನೋಡಲ್ ಅಧಿಕಾರಿ ಸುಜಾತಾ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.
ವಲಯವಾರು ಡೆಂಘೆ ಪ್ರಕರಣ (ಮೇ 1-13ರವರೆಗೆ):
ಮಹದೇವಪುರ - 44
ಬೊಮ್ಮನಹಳ್ಳಿ - 23
ಆರ್.ಆರ್.ನಗರ - 8
ಪೂರ್ವ - 41
ದಕ್ಷಿಣ - 34
ಪಶ್ಚಿಮ - 16
ಯಲಹಂಕ - 6
ದಾಸರಹಳ್ಳಿ - 0
ಒಟ್ಟು - 172