ಜಿಲ್ಲೆ

ಬಿಬಿಎಂಪಿಯಿಂದ 1 ಲಕ್ಷ ಸಸಿ ನೆಡಲು ಯೋಜನೆ

ಆರ್.ತುಳಸಿಕುಮಾರ್

ಬೆಂಗಳೂರು: ಮಹಾನಗರದಲ್ಲಿ ಹಸಿರು ಹೆಚ್ಚಿಸುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ವರ್ಷ ಒಂದು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಿದೆ. ಈ ಯೋಜನೆಗೆ ವಿಶ್ವ ಪರಿಸರ ದಿನಾಚರಣೆ ದಿನವಾದ ಗುರುವಾರ (ಜೂ.5) ಚಾಲನೆ ಸಿಗಲಿದೆ.

ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಲಕ್ಷ ಸಸಿಗಳನ್ನು ನೆಡಲಾಗುತ್ತದೆ. ಪಾಲಿಕೆ ಪಾರ್ಕ್, ಕೆರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಗುರುವಾರ ಸಾಂಕೇತಿಕವಾಗಿ ಸಸಿ ನೆಟ್ಟ ಬಳಿಕ ಈ ಮಳೆಗಾಲದ ವಿವಿಧ ಸಮಯದಲ್ಲಿ ಲಕ್ಷ ಸಸಿಗಳನ್ನು ನೆಟ್ಟು ಗುರಿ ಪೂರ್ಣಗೊಳಿಸಲು ಪಾಲಿಕೆಯು ವೇಳಾಪಟ್ಟಿ ಹಾಕಿಕೊಂಡಿದೆ.

ಈ ಬಾರಿ ಹೆಚ್ಚಾಗಿ ದೇಶಿ ಪ್ರಭೇದದ ಸಸಿಗಳನ್ನೇ ಹೆಚ್ಚಾಗಿ ನೆಡಲಾಗುತ್ತದೆ. ಹೊಂಗೆ, ಬೇವು, ಮಾವು ಸೇರಿ 10 ಬಗೆಯ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಲಾಗುತ್ತಿದ್ದು, ಆಯಾ ವಲಯದಲ್ಲಿ ಅಗತ್ಯವಿರುವೆಡೆ ಕಾರ್ಯಕ್ರಮ ಹಮ್ಮಿಕೊಂಡು ಗಿಡಗಳನ್ನು ಬೆಳೆಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅರಣ್ಯ ವಿಭಾಗದ ಡಿಸಿಎಫ್​​ ಬಿ.ಎಲ್.ಜಿ.ಸ್ವಾಮಿ ತಿಳಿಸಿದ್ದಾರೆ.

ಕಳೆದ ವರ್ಷ ಪಾಲಿಕೆಯ ವಿವಿಧ ಸ್ಥಳಗಳಲ್ಲಿ 1.13 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಇದಕ್ಕೆ ನಾಗರಿಕ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರವೂ ಪಡೆಯಲಾಗಿತ್ತು. ನಾಗರಿಕರು ತಮ್ಮ ಪ್ರದೇಶಗಳಲ್ಲಿ ಸಸಿ ನೆಡಲು ಇಷ್ಟಪಟ್ಟಲ್ಲಿ ಜಾಗವನ್ನು ಪರಿಶೀಲಿಸಿ ಗಿಡ ನೆಡಲು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಿಜೆಐ ಚಾಲನೆ ನಾಳೆ:

ಬಿಬಿಎಂಪಿಯು ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬಾಲಭವನ, ತೋಟಗಾರಿಕೆ ಇಲಾಖೆ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಬ್ಬನ್‌ಪಾರ್ಕ್​ನ ಬಾಲಭವನ ಆವರಣದಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ಸಸಿ ನೆಡುವ ಯೋಜನೆ ಹಮ್ಮಿಕೊಂಡಿದೆ. ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಅವರು ಚಾಲನೆ ನೀಡಲಿದ್ದು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.