ಜಿಲ್ಲೆ

ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಪ್ರತಿಭಟನೆ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ಹೊರಗುತ್ತಿಗೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ ಸೋಮವಾರದಿಂದ ತರಗತಿಗಳನ್ನು ಬಹಿಷ್ಕರಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿರುವ ಹೊರಗುತ್ತಿಗೆಯ ಬೋಧಕ ವೃಂದದ ನೂರಾರು ಮಂದಿ ಪಾಲಿಕೆ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಗುತ್ತಿಗೆ ಶಿಕ್ಷಕರ ಸಂಘದ ನೇತೃತ್ವದಲ್ಲಿ ಆರಂಭಿಸಿರುವ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪದಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಈ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ವೇಳೆ ಹೊರಗುತ್ತಿಗೆ ಶಿಕ್ಷಕರನ್ನು ಅತಿಥಿ ಶಿಕ್ಷಕ/ಉಪನ್ಯಾಸಕರಾಗಿ ಹೆಸರು ಬದಲಾಯಿಸಿ ಹೆಚ್ಚಿನ ಸೌಲಭ್ಯವನ್ನು ಒದಗಿಸುವುದಾಗಿ ಪಾಲಿಕೆ ಭರವಸೆ ನೀಡಿತ್ತು. ಆದರೆ, ತರಗತಿಗಳು ಪ್ರಾರಂಭಗೊಂಡು ನಾಲ್ಕು ತಿಂಗಳು ಕಳೆಯುತ್ತಾ ಬಂದಿದ್ದರೂ, ಈವರೆಗೂ ಕೊಟ್ಟ ಭರವಸೆಯನ್ನು ಅಧಿಕಾರಿಗಳು ಈಡೇರಿಸಿಲ್ಲ. ಈ ನಿಲುವು ಖಂಡಿಸಿ ಪ್ರತಿಭಟನೆ ಕೈಗೊಂಡಿರುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆ ಈಡೇರಿಸಲು ಆಗ್ರಹ:

ಎಲ್ಲ ಹೊರಗುತ್ತಿಗೆ ಶಿಕ್ಷಕರು/ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು, ಪ್ರಾಥಮಿಕದಿಂದ ಹಿಡಿದು ಕಾಲೇಜು ಹಂತದವರೆಗೆ ಮಾಸಿಕ 30,000ದಿಂದ 50,000 ರೂ. ವರೆಗೆ ವೇತನ ಹೆಚ್ಚಳ, 5 ಲಕ್ಷ ರೂ. ಮೊತ್ತದ ವಿಮಾ ಸೌಲಭ್ಯ ಹಾಗೂ ಮಹಿಳಾ ಶಿಕ್ಷಕಿಯರಿಗೆ ವೇತನಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕೆಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಪದಾಧಿಕಾರಿಗಳು ಪಾಲಿಕೆಯನ್ನು ಒತ್ತಾಯಿಸಿದೆ.