ಬೆಂಗಳೂರು: ಪಾಯ ಕುಸಿದಿದ್ದ ಮೂರು ಅಂತಸ್ತಿನ ಕಟ್ಟಡ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಅನುಸರಿಸಿದ ಅವೈಜ್ಞಾನಿಕ ಕಾರ್ಯಾಚರಣೆಯಿಂದಾಗಿ 10 ಕುಟುಂಬಗಳು ಸೂರು ಕಳೆದುಕೊಂಡು ಬೀದಿಗೆ ಬಿದ್ದಿವೆ. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಮಣ್ಣುಪಾಲಾಗಿದ್ದು, ಮುಂದಿನ ಜೀವನ ಹೇಗೆಂಬ ಚಿಂತೆ ಬೆನ್ನೇರಿದೆ.
ಮಹಾಲಕ್ಷಿ್ಮೕ ಲೇಔಟ್ನ ಕಮಲಾನಗರದಲ್ಲಿರುವ ಎನ್ಜಿಒ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಕುಸಿದ 3 ಅಂತಸ್ತಿನ ಮನೆ ಕೆಡಹುವುದರ ಜತೆಗೆ ಅದರ ಅಕ್ಕಪಕ್ಕದಲ್ಲಿದ್ದ 4 ಮನೆಗಳನ್ನೂ ನೆಲಸಮಗೊಳಿಸಿರುವ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮನೆ ಕಳೆದುಕೊಂಡ ಕುಟುಂಬಗಳು ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಏನಾಯ್ತು?: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ 3 ಮಹಡಿಯ ಕಟ್ಟಡದ ಪಾಯ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಮನೆಯಲ್ಲಿದ್ದ ಸಣ್ಣ ವಸ್ತುವನ್ನೂ ತೆಗೆದುಕೊಳ್ಳಲು ಬಿಡದೆ ನಿವಾಸಿಗಳನ್ನು ತೆರವುಗೊಳಿಸಿ ಪ್ರಾಣಾಪಾಯದಿಂದ ಪಾರುಮಾಡಿದರು. ಬುಧವಾರ ಬೆಳಗ್ಗೆ 10 ಗಂಟೆಗೆ ಬಿಬಿಎಂಪಿ ಸಿಬ್ಬಂದಿ ಏಕಾಏಕಿ ಹಿಟಾಚಿ ಯಂತ್ರ ತಂದು ಅವೈಜ್ಞಾನಿಕವಾಗಿ ಮೂರಂತಸ್ತಿನ ಕಟ್ಟಡ ನೆಲಸಮಗೊಳಿಸಿದ್ದಾರೆ. ಇದರಿಂದ ಮನೆಯಲ್ಲಿದ್ದ ಲಕ್ಷಾಂತರ ರೂ. ಸಾಮಗ್ರಿ, ಹಣ, ಆಭರಣ, ಅಡುಗೆ ಸಾಮಗ್ರಿ ಸೇರಿ ಎಲ್ಲವೂ ನಷ್ಟವಾಗಿದೆ. ಕಟ್ಟಡ ತೆರವು ಕಾರ್ಯಾಚರಣೆಯಿಂದ ಅಕ್ಕಪಕ್ಕದ 4 ಮನೆಗಳೂ ಕುಸಿದಿವೆ. ಈ ಮನೆಗಳಲ್ಲಿ ವಾಸವಿದ್ದ ಒಟ್ಟಾರೆ 10ಕ್ಕೂ ಅಧಿಕ ಕುಟುಂಬಗಳು ವಾಸಕ್ಕೆ ನೆಲೆಯಿಲ್ಲದೆ ಬೀದಿಯಲ್ಲಿ ನಿಂತಿವೆ.
ಇದೆಂಥಾ ಕಾರ್ಯಾಚರಣೆ?: 5 ವರ್ಷಗಳ ಹಿಂದೆಯೇ ತಳಪಾಯದ ಸಮೇತ ಮನೆ ಸ್ಥಳಾಂತರಿಸುವ ತಂತ್ರಜ್ಞಾನ ಬಂದಿದೆ. ಇನ್ನು ತಳಪಾಯ ಮಾತ್ರ ಕುಸಿದಿದ್ದ ಕಟ್ಟಡಕ್ಕೆ ಕೆಳಗಿಂದ ಸ್ವಲ್ಪ ಆಧಾರ ಕೊಟ್ಟು ಕಟ್ಟಡ ಕುಸಿಯದಂತೆ ಕಾಪಾಡುವುದು ದೊಡ್ಡ ಕೆಲಸವಾಗಿರಲಿಲ್ಲ. ಇದಕ್ಕಾಗಿ ರಾಜ್ಯ ಅಥವಾ ಅಂತಾರಾಜ್ಯ ತಾಂತ್ರಿಕ ಪರಿಣತರನ್ನೂ ಪಾಲಿಕೆ ಸಂಪರ್ಕ ಮಾಡಿಲ್ಲ. ಬಿಬಿಎಂಪಿ ಅಧಿಕಾರಿಗಳು ತರಾತುರಿಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆಗೆ ಕೈ ಹಾಕಿದರು. ದೊಡ್ಡ ಕಟ್ಟಡ ಬಿದ್ದ ರಭಸಕ್ಕೆ 2 ಶೀಟ್ ಮನೆ ಧ್ವಂಸವಾಗಿವೆ. ಅಕ್ಕಪಕ್ಕದಲ್ಲಿದ್ದ ಶೀಟ್ ಮನೆ ಹಾಗೂ 1 ಮಹಡಿ ಕಟ್ಟಡ ಹಾನಿಗೀಡಾಗಿದೆ.
ವಸ್ತುಗಳು ಮಣ್ಣುಪಾಲು: ರಾತ್ರಿ ವೇಳೆ ತಳಪಾಯ ಕುಸಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಬಂದು ಉಟ್ಟಬಟ್ಟೆಯಲ್ಲಿಯೇ ಎಲ್ಲರನ್ನೂ ಮನೆಯಿಂದ ಹೊರಕ್ಕೆ ಕಳುಹಿಸಿದ್ದಾರೆ. ನಗದು ಹಣ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಅಡುಗೆ ಸಾಮಗ್ರಿ ಮನೆಯಲ್ಲಿದ್ದವು. ವಿದ್ಯಾಭ್ಯಾಸ ಪ್ರಮಾಣಪತ್ರ, ಮನೆ ಭೋಗ್ಯದ ದಾಖಲೆ ಸೇರಿ ಎಲ್ಲ ಅಗತ್ಯ ದಾಖಲೆಗಳು ಕೂಡ ಮನೆಯಲ್ಲಿ ಸಿಲುಕಿವೆ.
ನಿರ್ವಿುಸಿದ್ದ ಕಟ್ಟಡ ಖರೀದಿ: ಎನ್ಜಿಒ ಕಾಲನಿಯಲ್ಲಿ 1540 ಅಳತೆಯ ನಿವೇಶನದಲ್ಲಿ ಪಕ್ಕದಲ್ಲಿ 10 ಅಡಿ ಆಳಕ್ಕೆ ತಗ್ಗು ಪ್ರದೇಶವಿದೆ. ಈ ತಗ್ಗು ಪ್ರದೇಶಕ್ಕೆ ಕಟ್ಟಡ ವಾಲಿಕೊಳ್ಳದಂತೆ ತಡೆಗೋಡೆ ನಿರ್ವಿುಸದೆ 15 ವರ್ಷಗಳ ಹಿಂದೆ 3 ಮಹಡಿ ಕಟ್ಟಡ ನಿರ್ವಿುಸಲಾಗಿದೆ. ಒಟ್ಟು 6 ಮನೆಗಳಿದ್ದವು. 10 ಲಕ್ಷ ರೂ. ಕೊಟ್ಟು ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದೆ. ಈಗ ಹಣವೂ ಇಲ್ಲ, ಮನೆಯೂ ಇಲ್ಲದೆ ಬೀದಿಗೆ ಬಂದಿದ್ದೇವೆ ಎಂದು ಲೋಕೇಶ್ ಎಂಬುವರು ಅಳಲು ತೋಡಿಕೊಂಡರು.