ಜಿಲ್ಲೆ

ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಮೀನಮೇಷ

ಬೆಂಗಳೂರು: ಮಹಾನಗರದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹೆಚ್ಚಿನ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಇವುಗಳನ್ನು ದುರಸ್ತಿಗೊಳಿಸಲಿ ಬಿಬಿಎಂಪಿ ಹಿಂದೇಟು ಹಾಕಿದೆ. ಮತ್ತೆ ವರ್ಷಧಾರೆ ಸುರಿಯಲಿರುವ ಕಾರಣ ಮಳೆನಿಂತ ಬಳಿಕ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ನಿಲುವಿನಿಂದಾಗಿ ಮತ್ತಷ್ಟು ಗುಂಡಿಗಳು ವಾಹನ ಸವಾರರನ್ನು ಹೈರಾಣರಾಗಿಸಿದೆ.

ಕಳೆದ ವಾರ ಒಂದೇ ದಿನ 132 ಮಿ.ಮೀ. ಮಳೆ ಸುರಿದಿದ್ದು ನಿಜ. ಮಳೆನೀರು ಪ್ರವಾಹದ ರೂಪದಲ್ಲಿ ಹರಿದ ಕಾರಣ ಗುಂಡಿಗಳು ಉಂಟಾಗಿವೆ. ಕೆಲವೆಡೆ ರಸ್ತೆಗಳೇ ಹೆಚ್ಚು ದುಸ್ಥಿತಿಗೆ ಒಳಗಾಗಿವೆ ಎಂಬುದಾಗಿ ಪಾಲಿಕೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಆದರೆ, ನಾಲ್ಕೈದು ದಿನಗಳಿಂದ ಮಳೆ ಬಂದಿಲ್ಲ. ಒಣ ಹಣವೆ ಮುಂದುವರಿದಿದ್ದರೂ, ಗುಂಡಿ ಮುಚ್ಚುವ ಕೆಲಸ ಮಾಡಲು ಇಲ್ಲದ ಸಬೂಬು ಹೇಳಲಾಗುತ್ತಿದೆ. ಇದರಿಂದ ನಾಗರಿಕರು ಅನಗತ್ಯವಾಗಿ ಸಮಸ್ಯೆಗೆ ಒಳಗಾಗಿದ್ದಾರೆ.

ಗುಂಡಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಸವಾರರು ನಿಧಾನವಾಗಿ ಚಲಿಸುವಂತಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಕೆಲ ಅಪಘಾತಗಳು ಸಂಭವಿಸಿವೆ. ಇನ್ನೂ ಕೆಲವೆಡೆ ವಿವಿಧ ಕಾಮಗಾರಿ ಕೈಗೊಂಡಿರುವ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ಅಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿರುವ ಕಾರಣ ಅನಗತ್ಯ ಸಂಚಾರ ಸಿಕ್ಕು ಸೃಷ್ಟಿಯಾಗಿದೆ.

ಹೊರವಲಯದಲ್ಲೇ ಹೆಚ್ಚು ಸಮಸ್ಯೆ:

ನಗರದ ಹೊರವಲಯಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಜಾಲ ಇಲ್ಲ. ಇರುವ ರಸ್ತೆಗಳು ಅಧ್ವಾನಗೊಂಡಿವೆ. ಕೆಲವು ರಸ್ತೆಗಳು ಡಾಂಬರು ಕಂಡು ವರ್ಷಗಳೇ ಗತಿಸಿವೆ. ಹೀಗಾಗಿ ಮಳೆಯಿಂದ ಸೃಷ್ಟಿಯಾಗಿರುವ ಗುಂಡಿಗಳು ವಿಸ್ತಾರವಾಗುತ್ತಿವೆ. ತಾತ್ಕಾಲಿಕವಾಗಿ ಕಲ್ಲು-ಮಣ್ಣ ಹಾಕಿ ತುಂಬಿದ್ದರೂ, ಅವುಗಳ ಮೇಲೆ ವಾಹನ ಸಂಚರಿಸಿದ ಬಳಿಕ ಯಥಾಸ್ಥಿತಿಗೆ ಮರಳಿವೆ. ಕೆ.ಆರ್.ಪುರ. ಮಹದೇವಪುರ, ಬೊಮ್ಮನಹಳ್ಳಿ, ಆರ್.ಆರ್.ನಗರ, ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಲ್ಲಿನ ರಸ್ತೆಗಳಲ್ಲಿ ಸಾವಿರಾರು ರಸ್ತೆಗುಂಡಿಗಳು ಜನರ ಜೀವ ಹಿಂಡುತ್ತಿವೆ.

‘ಫಿಕ್ಸ್ ಮೈ ಸ್ಟ್ರೀಟ್’ಗೆ ದೂರುಗಳ ಸುರಿಮಳೆ:

ರಸ್ತೆಗುಂಡಿಗಳ ಬಗ್ಗೆ ದೂರು ನೀಡಲು ಪಾಲಿಕೆ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ರೂಪಿಸಿದೆ. ಇದಕ್ಕೆ ನಿತ್ಯ ನೂರಾರು ದೂರುಗಳು ಬರುತ್ತಿವೆ. ಹೀಗೆ ಬಂದಂತಹ ದೂರುಗಳನ್ನು ಆಯಾ ವಲಯಗಳಿಗೆ ರವಾನಿಸಿ ಸ್ಥಳೀಯವಾಗಿ ದುರಸ್ತಿಪಡಿಸಲು ಕ್ರಮ ಕೈಗೊಳ್ಳುವ ವಿಧಾನ ಅಳವಡಿಸಿಕೊಳ್ಳಲಾಗಿದೆ. ಆದರೆ, ಕೆಳಹಂತದಲ್ಲಿ ಈ ಮಾಹಿತಿಯನ್ನು ವಾರ್ಡ್ ಇಂಜಿನಿಯರ್‌ಗಳಿಗೆ ರವಾನಿಸದ ಕಾರಣ ಕಾಲಮಿತಿಯೊಳಗೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಮುಖ್ಯ ಆಯುಕ್ತರು ಹೇಳಿಕೆ ನೀಡಿ ಸುಮಾರು 4 ಸಾವಿರ ದೂರು ಬಂದಿವೆ ಎಂದಿದ್ದರು. ಈ ಪೈಕಿ ಈವರೆಗೆ ಅರ್ಧದಷ್ಟೂ ಗುಂಡಿಗಳನ್ನು ಮುಚ್ಚಿಲ್ಲ ಎಂದು ತಿಳಿದುಬಂದಿದೆ.

ಪ್ರಮುಖ ರಸ್ತೆಗಳಲ್ಲಷ್ಟೇ ದುರಸ್ತಿಕಾರ್ಯ:

ನಗರದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಿವೆ. ಇವುಗಳಲ್ಲೂ ಗುಂಡಿಗಳು ಉಂಟಾಗಿದ್ದು, ಇಂತಹ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಪಾಲಿಕೆ ಅಧಿಕಾರಿಗಳು ದೃಷ್ಟಿ ಹರಿಸಿದ್ದಾರೆ. ಹೆಚ್ಚು ವಾಹನ ಚಲಿಸುವ ಹಾಗೂ ಅಧಿಕವಾಗಿ ಬಳಸಲ್ಪಡುವ ರಸ್ತೆಗಳನ್ನು ಆದ್ಯತೆ ಮೇರೆಗೆ ದುರಸ್ತಿ ಮಾಡಲಾಗುತ್ತಿದೆ.

ಹೊಸ ಯೋಜನೆಯತ್ತ ಡಿಸಿಎಂ ಗಮನ:

ನಗರದಲ್ಲಿ ರಸ್ತೆಗುಂಡಿ ಸಮಸ್ಯೆಗೆ ಸ್ಪಷ್ಟ ಪರಿಹಾರ ಒದಗಿಸಲು ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇದರಿಂದ ಒಮ್ಮೆಲೇ ಎಲ್ಲೆಡೆ ಕಾಣಿಸಿಕೊಂಡಿರುವ ಗುಂಡಿಗಳಿಗೆ ಮುಕ್ತಿ ನೀಡಲಾಗುವುದು. ಎಲ್ಲ ವಲಯಗಳಲ್ಲೂ ಏಕ ಕಾಲದಲ್ಲಿ ದುರಸ್ತಿ ಕೈಗೊಳ್ಳಲಾಗುವುದು ಎಂದು ಡಿಸಿಎಂ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆಯನ್ನು ಕಾರ್ಯಗತ ಮಾಡಲು ಪಾಲಿಕೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ ಹೊಸ ಕಾರ್ಯಕ್ರಮ ಕಾಗದದಲ್ಲೇ ಉಳಿದಿದೆ.

ದುರಸ್ತಿಗೆ ಕುಂಟುನೆಪ:

ರಸ್ತೆಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಿದರಷ್ಟೇ ಮತ್ತೆ ಸಮಸ್ಯೆ ಎದುರಾಗದು. ಇದಕ್ಕಾಗಿ ಮಳೆ ಬಿದ್ದಾಗ ಅಲ್ಲಿನ ಗುಂಡಿಗಳನ್ನು ಮುಚ್ಚಲು ಪ್ರತ್ಯೇಕ ಮಾದರಿ ಅನುಸರಿಸಬೇಕಾಗುತ್ತದೆ. ಗುಂಡಿಗಳನ್ನು ಸ್ವಚ್ಛಗೊಳಿಸಿ ವೆಟ್ ಮಿಕ್ಸ್ ಹಾಕಿದ ಬಳಿಕ ರೋಡ್ ರೋಲರ್‌ನಿಂದ ಸಮತಟ್ಟು ಮಾಡಬೇಕಾಗುತ್ತದೆ. ಇಂತಹ ಕಡೆಗಳಲ್ಲಿ ಗುಂಡಿಗಳನ್ನು ಪತ್ತೆ ಹಚ್ಚಿ ಅಗತ್ಯ ಸಿಬ್ಬಂದಿಯೊಂದಿಗೆ ದುರಸ್ತಿ ಮಾಡಿಸುವ ಕೆಲಸ ವಾರ್ಡ್ ಇಂಜಿಂನಿಯರ್, ಎಇಇ ಕಡೆಯಿಂದ ಆಗುತ್ತಿಲ್ಲ ಎಂಬ ಆಕ್ಷೇಪ ಕೆಲ ಮಾಜಿ ಕಾರ್ಪೊರೇಟರ್‌ಗಳು ದೂರಿದ್ದಾರೆ.